Wednesday, May 1, 2024
Homeರಾಷ್ಟ್ರೀಯ500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಆಚರಣೆ

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಆಚರಣೆ

ಈ ನೆಲದ ದೈವಿಕ ದೃಢತೆ, ಎಲ್ಲರ ಮನಸ್ಸಿನ ಆರಾಧನೆ, ಕೋಟ್ಯಂತರ ಜನರ ಸಂಕಲ್ಪ ಈಡೇರಿದ ಕ್ಷಣವಿದು. 500 ವರ್ಷಗಳಿಂದ ಪರಿತಪಿಸುತ್ತಿದ್ದ ಭಕ್ತರ ಕನಸು ನನಸಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದೊಂದಿಗೆ ನವ ಪೀಳಿಗೆ ಈ ಬಾರಿಯ ರಾಮನವಮಿಯನ್ನು ಸಾರ್ಥಕತೆಯೊಂದಿಗೆ ಆಚರಿಸುವಂತಾಗಿದೆ.

ಅಯೋಧ್ಯೆಯಲ್ಲಾದ ಅನ್ಯಾಯದ ಇತಿಹಾಸವೇ ಒಂದು ಅಪಥ್ಯವಾದ ದೃಷ್ಟಾಂತ. ಕ್ರಿ.ಶ.1500ರಲ್ಲಿ ಮೊಘಲ್ ದೊರೆ ಬಾಬರ್ ಭಾರತಕ್ಕೆ ಬಂದ ಕಾಲಮಾನ. ಭಾರತಕ್ಕೆ ಬಂದು ಎರಡು ವರ್ಷಗಳ ನಂತರ, ಬಾಬರನ ಸುಬೇದಾರ್ ಮಿರ್ಬಕಿ ಅಯೋಧ್ಯೆಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಈ ಮಸೀದಿಯನ್ನು ರಾಮನು ಜನಿಸಿದ ಸ್ಥಳದಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಅದಕ್ಕಾಗಿ ಮೂಲ ಸ್ಥಾನದಲ್ಲಿದ್ದ ರಾಮಮಂದಿರವನ್ನು ನೆಲಸಮಗೊಳಿಸಲಾಗಿತ್ತು.

ಅಂದಿನಿಂದ ಇಂದಿನವರೆಗೂ ಅಯೋಧ್ಯೆಯಲ್ಲಿ ರಾಮನ ಜನ್ಮ ದಿನವಾದ ರಾಮನವಮಿಯೇ ರದ್ದಾಗಿತ್ತು. ಮೊಘಲರ ಆಳ್ವಿಕೆ ದೇಶಾದ್ಯಂತ ಹರಡುತ್ತಿದ್ದ ಕಾಲವದು. 1528 ರಿಂದ 1853 ರವರೆಗೆ ಮೊಘಲರು, ನವಾಬರ ಆಳ್ವಿಕೆಯಲ್ಲಿ ಅನೇಕ ದೇವಾಲಯಗಳನ್ನು ನಾಶ ಮಾಡಲಾಯಿತು. 19ನೆ ಶತಮಾನದಲ್ಲಿ ಮೊಘಲರು ಮತ್ತು ನವಾಬರ ಆಳ್ವಿಕೆಯು ದುರ್ಬಲಗೊಳ್ಳುತ್ತಾ ಬಂದಿತ್ತು, ಬ್ರಿಟಿಷರ ಆಳ್ವಿಕೆ ಶುರುವಾಗಿತ್ತು. ಈ ಅವಯಲ್ಲಿ ಭಗವಾನ್ ಶ್ರೀ ರಾಮನ ಜನ್ಮಸ್ಥಳದಲ್ಲಿ ರಾಮಮಂದಿರ ಪುನರ್ ನಿರ್ಮಾಣವಾಗಬೇಕು ಎಂದು ಜನ ಹಂಬಲಿಸಿದರು, ಹೋರಾಟಕ್ಕಿಳಿದರು.

ದಿನ ಕಳೆದಂತೆ ರಾಮಲಲ್ಲಾ ಜನ್ಮಸ್ಥಳವನ್ನು ಮರಳಿ ಪಡೆಯಬೇಕೆಂಬ ತುಡಿತ ಪ್ರಬಲವಾಯಿತು. ಹಂತ ಹಂತವಾಗಿ ರಾಮಮಂದಿರ ಚಳವಳಿ, ಅಭಿಯಾನವಾಗಿ ರೂಪಾಂತರವಾಯಿತು. ಹಿಂದೂಗಳ ಸತತ ಹೋರಾಟದ ಫಲ, ಕಾನೂನಿನ ಸಂಘರ್ಷ, ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಇದೇ ವರ್ಷದ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿ ಬಾಲರಾಮ ವಿರಾಜಮಾನನಾಗಿದ್ದು, ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಸುಮಾರು 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನವ ಪೀಳಿಗೆ ರಾಮ ಜನ್ಮಭೂಮಿಯಲ್ಲಿ ಸ್ವ ಅಸ್ಮಿತೆಯ ರಾಮನವಮಿಯನ್ನು ಆಚರಿಸುತ್ತಿದೆ.

ಬಾಲರಾಮನ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಲೋಕಾರ್ಪಣೆ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಮನವಮಿಗೆ ವಿಶೇಷ ಸಿದ್ಧತೆ ಕೈಗೊಳ್ಳಲಾಗಿದೆ. ದೇವಾಲಯವನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಲಾಗಿದೆ. ಇದಕ್ಕಾಗಿ 45 ಕ್ವಿಂಟಾಲ್‍ಗೂ ಅಕವಾದ ಅಗತ್ಯ ಹೂವುಗಳನ್ನು ದೇಶದ ನಾನಾ ಭಾಗಗಳಿಂದ ತರಿಸಲಾಗಿದೆ. ವಿಶೇಷವಾದ ವಿದ್ಯುತ್ ದೀಪಾಲಂಕಾರಗಳಿಂದ ರಾಮಮಂದಿರ ಮನೋಲ್ಲಾಸ ಪೂರ್ವಕವಾಗಿ ಕಂಗೊಳಿಸುತ್ತಿದೆ.

ಇಂದು ಬೆಳಗ್ಗೆ 3.30ಕ್ಕೆ ಮಹಾಮಂಗಳಾರತಿ ಆರಂಭಗೊಂಡು ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ರಾತ್ರಿ 11 ಗಂಟೆವರೆಗೂ ನಿರಂತರವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದರಿಂದ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದಿದ್ದಾರೆ.

ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ದೇವಲೋಕವೇ ಧರೆಗಿಳಿದುಬಂದಂತಹ ವಾತಾವರಣ ಸೃಷ್ಟಿಯಾಗಿದೆ. ಇಡೀ ನಗರ ತಳಿರುತೋರಣಗಳಿಂದ ಕಂಗೊಳಿಸುತ್ತಿದ್ದು, ಬರುವ ಭಕ್ತಾದಿಗಳಿಗೆ ಸ್ವಯಂ ಸೇವಕರಾಗಿ ನೂರಾರು ಸಂಸ್ಥೆಗಳು ಆಹಾರ ವಿತರಿಸುತ್ತಿವೆ. ಇನ್ನೊಂದೆಡೆ ಪಾನಕ, ಮಜ್ಜಿಗೆ ಕೂಡ ವಿತರಿಸಲಾಗುತ್ತಿದೆ.
ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟುತ್ತಿದ್ದು, ಎಲ್ಲೆಡೆ ಶ್ರೀರಾಮನಾಮ ಪಸರಿಸಿದೆ.

ಬಾಲರಾಮನ ಹಣೆಗೆ ಸೂರ್ಯರಶ್ಮಿ:


ಶ್ರೀ ರಾಮ ಜನ್ಮದಿನೋತ್ಸವ ಸಂದರ್ಭದಲ್ಲಿ ಏ.17ರಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳ ತಿಲಕ ರಾಮಲಲ್ಲಾನ ಹಣೆಯಲ್ಲಿ ರಾರಾಜಿಸಲಿದೆ. ಈ ಸೂರ್ಯ ತಿಲಕವು 75 ಮಿ.ಮೀ. ಆಕಾರದಲ್ಲಿ ಇರಲಿದೆ. ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ತಜ್ಞರು ಈ ಕುರಿತು ಅಣಕು ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳುವುದನ್ನು ನೋಡಿ ಎಲ್ಲರೂ ಪುಳಕಿತರಾಗಿದ್ದಾರೆ.

RELATED ARTICLES

Latest News