Sunday, April 28, 2024
Homeರಾಜ್ಯ29ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭ, ಸ್ಟಾರ್ ಪ್ರಚಾರಕರ ಸಾಥ್

29ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭ, ಸ್ಟಾರ್ ಪ್ರಚಾರಕರ ಸಾಥ್

ಬೆಂಗಳೂರು,ಮಾ.24- ರಾಜ್ಯದಲ್ಲಿನ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ನಾಯಕರು ಇದೇ ತಿಂಗಳ 29 ರಿಂದ ಅಧಿಕೃತ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.ರಾಷ್ಟ್ರೀಯ ನಾಯಕರ ಪೈಕಿ ಹಲವು ಸ್ಟಾರ್ ಪ್ರಚಾರಕರು ರಾಜ್ಯಕ್ಕಾಗಮಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಪೈಕಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅಲ್ಲಲ್ಲಿ ರೋಡ್‍ಶೋ, ಬಹಿರಂಗ ಸಮಾವೇಶಗಳನ್ನು ಆಯೋಜಿಸಲಾಗಿದೆ.

ಪ್ರತಿ ದಿನ 2 ರಿಂದ 3 ಬಹಿರಂಗ ಸಭೆಗಳು ಹಾಗೂ ನಾಲ್ಕರಿಂದ ಐದು ಕಡೆ ರೋಡ್ ಶೋಗಳಲ್ಲಿ ಸಿದ್ದರಾಮಯ್ಯ ಮತ ಭೇಟೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಚುನಾವಣಾ ಯಾತ್ರೆ ನಡೆಸಲಿದ್ದು, ದಕ್ಷಿಣ ಕರ್ನಾಟಕ ಭಾಗದಲ್ಲಿ ಅದರಲ್ಲೂ ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಣಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 2ನೇ ಹಂತದಲ್ಲಿ ಚುನಾವಣೆ ನಡೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.ರಾಹುಲ್‍ಗಾಂ ಮತ್ತು ಸೋನಿಯಾಗಾಂಧಿ ಈ ಬಾರಿ ರಾಜ್ಯದಲ್ಲಿ ಹೆಚ್ಚು ಪ್ರವಾಸ ಕೈಗೊಳ್ಳುವ ನಿರೀಕ್ಷೆಗಳಿವೆ.

ಸೋನಿಯಾಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದರಿಂದ ಪ್ರಚಾರ ಕಾರ್ಯಗಳಿಗೆ ಹೆಚ್ಚು ಸಮಯ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈವರೆಗಿನ ವೇಳಾಪಟ್ಟಿಯ ಪ್ರಕಾರ, ಸೋನಿಯಾಗಾಂ ಮೊದಲ ಹಂತದ ಚುನಾವಣೆಗೆ 4 ರಿಂದ 5 ಬಾರಿ 2 ನೇ ಹಂತದ ಚುನಾವಣೆಯಲ್ಲಿ 5 ರಿಂದ 6 ಬಾರಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದಾಗಿ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇವೆ.

ಉಳಿದಂತೆ ಹಲವು ಸ್ಟಾರ್ ಪ್ರಚಾರಕರು ರಾಜ್ಯದಲ್ಲಿ ಸಂಚಾರ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದು ತಿಳಿದುಬಂದಿದೆ.ಬಿಜೆಪಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಬಳಸಿಕೊಂಡಂತೆ ಕಾಂಗ್ರೆಸ್ ರಾಜ್ಯ ನಾಯಕರಿಗೆ ಆದ್ಯತೆ ನೀಡುತ್ತಿದೆ. 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮನೆಮನೆ ತಲುಪುವ ಅಭಿಯಾನವನ್ನು ಚುರುಕುಗೊಳಿಸುತ್ತಿದೆ.

ವಿಧಾನಸಭೆಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್‍ಗಳನ್ನು ತಲುಪಿಸುವಂತೆ ಲೋಕಸಭಾ ಚುನಾವಣೆಯಲ್ಲಿ ಭರವಸೆ ಕಾರ್ಡ್‍ಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಕಾರ್ಯಕರ್ತರ ದಂಡನ್ನೇ ಸಜ್ಜುಗೊಳಿಸಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾಗಿರುವ ಅನ್ಯಾಯ ಹಾಗೂ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ.

RELATED ARTICLES

Latest News