ನವದೆಹಲಿ,ಮಾ.31- ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗಾಗಿ ದೇಶದ ಜನರಿಗೆ ಭರವಸೆ ನೀಡುವ ಪ್ರಣಾಳಿಕೆಯನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ಮುಂದಾಗುತ್ತಿದ್ದಂತೆ ಬಿಜೆಪಿ ತರಾತುರಿಯಲ್ಲಿ ಪ್ರಣಾಳಿಕಾ ಸಮಿತಿಯನ್ನು ರಚಿಸಿದೆ.ಶನಿವಾರ ಬಿಜೆಪಿ 27 ಸದಸ್ಯರ ಪ್ರಣಾಳಿಕಾ ಸಮಿತಿಯನ್ನು ರಚಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಸಮಿತಿಯಲ್ಲಿ ಹಲವು ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿದ್ದಾರೆ.ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂಚಾಲಕರಾಗಿದ್ದು, ಕೇಂದ್ರ ಸಚಿವ ಪಿಯುಷ್ ಘೋಯಲ್ ಸಹ ಸಂಚಾಲಕರಾಗಿದ್ದಾರೆ.
ಗುಜರಾತ್, ಅಸ್ಸಾಂ, ಮಧ್ಯಪ್ರದೇಶದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದ್ರ ಯಾದವ್, ಕಿರಣ್ ರೀಜೀಜು, ಅರ್ಜುನ್ ಮುಂದ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್ ಸದಸ್ಯರಾಗಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಈಗಾಗಲೇ ಸಿದ್ಧಪಡಿಸಿದೆ. ಆ ಪಕ್ಷದ ಪ್ರಧಾನ ಕಾರ್ಯದರ್ಶಿ ಜಯರಾಂ ರಮೇಶ್, ಈಗಾಗಲೇ ನಮ್ಮ ಪಕ್ಷ ಪಂಚನ್ಯಾಯ್, 50 ಗ್ಯಾರಂಟಿಗಳನ್ನು ಮಾ.16 ರಂದು ಬಿಡುಗಡೆ ಮಾಡಿದೆ. ಇದನ್ನು ಆಧಾರವಾಗಿಟ್ಟುಕೊಂಡು ಮನೆಮನೆಗೆ ಗ್ಯಾರಂಟಿ ಎಂಬ ಪ್ರಚಾರ ನಡೆಯುತ್ತಿದೆ. ದೇಶಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡುಗಳನ್ನು ಹಂಚುವ ಅಭಿಯಾನ ಏ.3 ರಿಂದ ಆರಂಭಗೊಳ್ಳಲಿದೆ. ಏ.5 ರಂದು ಪಕ್ಷದ ಪ್ರಣಾಳಿಕೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಕೊನೆಕ್ಷಣದಲ್ಲಿ ತನ್ನ ಪ್ರಣಾಳಿಕೆ ತಯಾರಿಸಲು ಮುಂದಾಗಿದೆ. ಇದು ಕೇವಲ ಜನರನ್ನು ಮರಳು ಮಾಡುವ ಪ್ರಯತ್ನ. ಇದರಿಂದಾಗಿಯೇ ಬಿಜೆಪಿಗೆ ಜನರ ಮೇಲೆ ಎಷ್ಟು ಕಾಳಜಿ ಇದೆ ಎಂದು ಅರ್ಥವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ತಯಾರಿಸುವ ಮುನ್ನ ಹಲವು ತಿಂಗಳುಗಳ ಕಾಲ ವಿವಿಧ ಸಮಾಲೋಚನೆಯನ್ನು ನಡೆಸಿತ್ತು. ಇ-ಮೇಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಲಹೆಗಳನ್ನು ಪಡೆಯಲಾಗಿತ್ತು. ಭಾರತದ ಧ್ವನಿ ಎಂಬ ವೆಬ್‍ಸೈಟ್ ಮೂಲಕವೂ ಜನರಿಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ನಮ್ಮ ಪ್ರಣಾಳಿಕೆ ಜನರ ಧ್ವನಿಯಾಗಿದೆ. ಬಿಜೆಪಿಯವರದು ಮುಚ್ಚಿದ ಪೆಟ್ಟಿಗೆಯಲ್ಲಿನ ಕಡತವಾಗಿದೆ ಎಂದು ಲೇವಡಿ ಮಾಡಿದ್ದಾರೆ.