Saturday, May 4, 2024
Homeಇದೀಗ ಬಂದ ಸುದ್ದಿರಂಗೇರತೊಡಗಿದೆ ಲೋಕಸಭಾ ಚುನಾವಣೆ, ರೋಡ್ ಶೋ,ರ್‍ಯಾಲಿಗಳಿಗೆ ರಾಜಕೀಯ ಪಕ್ಷಗಳು ಸಜ್ಜು

ರಂಗೇರತೊಡಗಿದೆ ಲೋಕಸಭಾ ಚುನಾವಣೆ, ರೋಡ್ ಶೋ,ರ್‍ಯಾಲಿಗಳಿಗೆ ರಾಜಕೀಯ ಪಕ್ಷಗಳು ಸಜ್ಜು

ಬೆಂಗಳೂರು,ಮಾ.31- ಲೋಕಸಭಾ ಚುನಾವಣಾ ಪ್ರಚಾರದ ಭರಾಟೆ ರಂಗೇರತೊಡಗಿದೆ. ಅಬ್ಬರದ ಪ್ರಚಾರ, ಬೃಹತ್ ಮೆರವಣಿಗೆ, ರೋಡ್ ಶೋ, ರ್ಯಾಲಿ ನಡೆಸಲು ರಾಜಕೀಯ ಪಕ್ಷಗಳು ಸಜ್ಜಾಗಿವೆ.ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ, ಆಶೀರ್ವಾದ ಪಡೆಯುವುದರ ಜೊತೆಗೆ ಮಠ-ಮಂದಿರಗಳಿಗೆ ತೆರಳಿ ಮಠಾೀಶರ ಆಶೀರ್ವಾದ ಪಡೆಯುತ್ತಿದ್ದಾರೆ.

ಕಾರ್ಯಕರ್ತರು, ಬೆಂಬಲಿಗರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮನೆಮನೆಗಳಿಗೆ ತೆರಳಿ ಕರಪತ್ರಗಳನ್ನು ಹಂಚುತ್ತಾ ಈಗಾಗಲೇ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.ಬೆಳ್ಳಂಬೆಳಿಗ್ಗೆ ಪಾರ್ಕು, ಬಸ್‍ನಿಲ್ದಾಣ, ಹೋಟೆಲ್ ಮುಂತಾದ ಕಡೆ ಅಭ್ಯರ್ಥಿಗಳು ತೆರಳಿ ಅಲ್ಲಿಗೆ ಭೇಟಿ ನೀಡುವ ಜನರೊಂದಿಗೆ ಬೆರೆತು ಮಾತುಕತೆ ನಡೆಸುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

ತಾಲೂಕು, ಹೋಬಳಿ, ಗ್ರಾಮಮಟ್ಟದಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳ ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದಾರೆ.
ಗ್ರಾಮಗ್ರಾಮಗಳಲ್ಲಿ ಇರುವ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ದೇವಸ್ಥಾನಗಳ ಅಭಿವೃದ್ಧಿಗೆ ಭರವಸೆ, ಆರ್ಥಿಕ ಸಹಾಯ ನೀಡುತ್ತಿರುವುದು ಕಂಡುಬರುತ್ತಿದೆ.

ನೇರವಾಗಿ ಹಣ ನೀಡಿದರೆ ಆಯೋಗದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಗ್ರಾಮಗಳ ದೇವಸ್ಥಾನದ ಅಭಿವೃದ್ಧಿ ನೆಪದಲ್ಲಿ ಆರ್ಥಿಕ ನೆರವನ್ನು ಅಭ್ಯರ್ಥಿಗಳು ನೀಡುವ ಮೂಲಕ ಮತಗಳನ್ನು ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ.ಮಹಿಳಾ ಸಂಘಟನೆ, ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳ ಮುಖಂಡರೊಂದಿಗೆ ಚರ್ಚೆ ನಡೆಸಿ, ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿದಿನ ಪ್ರವಾಸ, ಪ್ರಚಾರ, ಮುಖಂಡರು, ಕಾರ್ಯಕರ್ತರ ಭೇಟಿ, ಅನ್ಯಪಕ್ಷಗಳ ಮುಖಂಡರು, ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.ಕ್ಷೇತ್ರದಲ್ಲಿ ಸಂಚರಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸುವ ಭರವಸೆ ನೀಡುವ ಮೂಲಕ ಮತಯಾಚನೆಯಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಸ್ಥಳಗಳಿಗೂ ಅಭ್ಯರ್ಥಿಗಳು ತಲುಪಲು ಸಾಧ್ಯವಾಗದ ಕಾರಣ ತಮ್ಮ ಬೆಂಬಲಿಗರ ಮೂಲಕ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ವಿಧಾನಸಭೆಯ ಶಾಸಕರು ಅಥವಾ ಮಾಜಿ ಶಾಸಕರ ಮೂಲಕ ಸಭೆ, ಸಮಾರಂಭಗಳನ್ನು ಆಯೋಜಿಸಿ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. ಮೊದಲ ಹಂತದ ಚುನಾವಣೆಗೆ ಕೇವಲ 26 ದಿನಗಳು ಬಾಕಿ ಇವೆ. ಕೆಲವು ಕ್ಷೇತ್ರಗಳಲ್ಲಿ ಇನ್ನೂ ಬಂಡಾಯ ಬಗೆಹರಿದಿಲ್ಲ. ಎಲ್ಲವೂ ಇಕ್ಕಟ್ಟು-ಬಿಕ್ಕಟ್ಟು ಬಗೆಹರಿದು ಬಿ ಫಾರಂ ಪಡೆದ ಅಭ್ಯರ್ಥಿಗಳು ತಮ್ಮತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರಕ್ಕೆ ಯೋಜನೆಗಳನ್ನು ರೂಪಿಸಿದ್ದಾರೆ. ಕೇಂದ್ರದ ನಾಯಕರೊಂದಿಗೆ ಬೃಹತ್ ರ್ಯಾಲಿ, ಮೆರವಣಿಗೆ, ರೋಡ್‍ಶೋ ಕಾರ್ಯಕ್ರಮಗಳ ಆಯೋಜನೆಯಲ್ಲಿ ತೊಡಗಿದ್ದಾರೆ.

RELATED ARTICLES

Latest News