ಬೆಂಗಳೂರು, ಅ.28- ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಶಾಸಕರ ಆರೋಪಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವನಿಗೂಡಿಸಿದ್ದಾರೆ. ಹೈದೆರಾಬಾದ್‍ಗೆ ತೆರಳುವ ಮೊದಲು ಸದಾಶಿವನಗರ ನಿವಾಸದ ಬಳಿ, ಮಂಡ್ಯದ ಶಾಸಕ ರವಿ ಗಣಿಗಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು ನಡೆಸುತ್ತಿರುವ ಪ್ರಯತ್ನಗಳು, ಒಡ್ಡುತ್ತಿರುವ ಆಮಿಷಗಳು ಹಾಗೂ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ ಎಂದರು.
ರವಿ ಗಣಿಗಾ ಯಾರೋ ಒಬ್ಬ ಹುಡುಗನ ಹೆಸರು ಹೇಳಿದ್ದಾರೆ. ಆತನಿಗಿಂತಲೂ ದೊಡ್ಡ, ದೊಡ್ಡ ನಾಯಕರು ಸರ್ಕಾರ ಪತನಗೊಳಿಸುವ ಷಡ್ಯಂತ್ರದ ಹಿಂದೆ ಇದ್ದಾರೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ. ಸರ್ಕಾರ ಪತನಗೊಳಿಲಸುವುದು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಅನಗತ್ಯ ಹೇಳಿಕೆ ಕೊಟ್ಟರೆ ನೊಟೀಸ್:
ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಕಾರದ ಬಗ್ಗೆ ಮಾಧ್ಯಮಗಳ ಮುಂದೆ ಶಾಸಕರಿರಲಿ, ನಾಯಕರಿರಲಿ ಯಾರೇ ಆದರೂ ಅನಗತ್ಯ ಹೇಳಿಕೆ ನೀಡಬಾರದು ಮನವಿ ಹಾಗೂ ಎಚ್ಚರಿಕೆ ಎರಡು ಮಾದರಿಯಲ್ಲೂ ಕೇಳಿಕೊಳ್ಳುತ್ತೇನೆ. ಇಷ್ಟರ ನಂತರವೂ ಹೇಳಿಕೆ ನೀಡಿದರೆ ವಿಧಿ ಇಲ್ಲದೆ ಅವರಿಗೆ ನೊಟೀಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಬಿರುಸಿನ ಚಟುವಟಿಕೆ ನಡೆಸುತ್ತಿದೆ. ಈಗಾಗಲೇ ಕಾಂಗ್ರೆಸ್‍ನ ಶಾಸಕರನ್ನು ಭೇಟಿ ಮಾಡಿ ತಲಾ 50 ಕೋಟಿ ರೂಪಾಯಿ ನೀಡುವ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಲಾಗಿದೆ. ಕಾಂಗ್ರೆಸ್ ತೊರೆಯುವುದಾದರೆ ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿಸುವುದಾಗಿ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಹೇಳಿದರು.
ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್
ಕಳೆದ ಎರಡು ತಿಂಗಳಿನಿಂದಲೂ ಈ ರೀತಿಯ ಚಟುವಟಿಕೆಗಳು ನಡೆಯುತ್ತಲೇ ಇವೆ ಎಂದು ಆರೋಪಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಹಲವು ಬಾರಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್-ಬಿಜೆಪಿ ನಡುವೆ ಮೈತ್ರಿಯಾದ ಬಳಿಕವಂತೂ ಕಾಂಗ್ರೆಸ್ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಲಾಗುತ್ತಿದೆ ಎಂಬ ಟೀಕೆಗಳಿವೆ.
ಅದರ ಬೆನ್ನಲ್ಲೆ ಜೆಡಿಎಸ್ ನಾಯಕರು ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಒಂದರ ಮೇಲೊಂದು ಆರೋಪ ಮಾಡಲಾರಂಭಿಸಿದ್ದಾರೆ. ಬಿಜೆಪಿ ಪಾಳೆಯದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದಿದ್ದರೂ ಪ್ರಮುಖ ನಾಯಕರು ಕಾಲಕಾಲಕ್ಕೆ ಸರ್ಕಾರವನ್ನು ಮುಜುಗರಕ್ಕೀಡು ಮಾಡುವ ಆರೋಪ ಮಾಡಲಾರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಪಂಚಖಾತ್ರಿಗಳ ಪೈಕಿ ನಾಲ್ಕು ಯೋಜನೆಗಳನ್ನು ಜಾರಿಗೊಳಿಸಿರುವ ಯಶಸ್ಸಿನಲ್ಲೇ ತೇಲುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಎದಿರಾಗಿ ಬಿಜೆಪಿ ಜೆಡಿಎಸ್ ಪಕ್ಷಗಳು ಖಾತ್ರಿ ಜಾರಿಯಲ್ಲಿ ಜನಪರ ನಿಲುವಿಲ್ಲ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದೆ. ಹಾಗೆಯೇ ಹಲವು ಭ್ರಷ್ಟಚಾರದ ಆರೋಪಗಳನ್ನು ಮಾಡಿದ್ದು ಈ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಹೇಳಿಕೆ ನೀಡಿದ್ದಾರೆ.
136 ಶಾಸಕರ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಸರ್ಕಾರವನ್ನು ಪತನ ಗೊಳಿಸಲು ಬಿಜೆಪಿಗೆ ಪಕ್ಷೇತರರನ್ನು ಹೊರತು ಪಡಿಸಿದರೆ 28 ಶಾಸಕರ ಸಂಖ್ಯಾಬಲದ ಅಗತ್ಯವಿದೆ. 66 ಶಾಸಕರ ಸಂಖ್ಯೆಯನ್ನು ಹೊಂದಿರುವ ಬಿಜೆಪಿ 19 ಶಾಸಕರನ್ನು ಹೊಂದಿರುವ ಜೆಡಿಎಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಎರಡು ಪಕ್ಷಗಳ ಬಲಾಬಲದ ಬಳಿಕ ಸರ್ಕಾರ ರಚನೆ ಮಾಡಲು 28 ಮಂದಿ ಶಾಸಕರು ಬೇಕಿದೆ. ಇನ್ನೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಮಾನ್ಯತೆ ಇಲ್ಲ. ಹೊಸ ಸರ್ಕಾರ ರಚನೆಯ ಸಂದರ್ಭ ಎದುರಾದರೆ ಅವರು ಬಿಜೆಪಿಯ ಜೊತೆ ಕೈ ಜೊಡಿಸುವುದರಲ್ಲಿ ಯಾವುದೇ ಅನುಮಾನಗಳಲ್ಲ.
ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದವನ್ನು ಪತನಗೊಳಿಸುವಾಗ 17 ಮಂದಿ ಶಾಸಕರನ್ನು ಆಪರೆಷನ್ ಕಮಲದ ಮೂಲಕ ಸೆಳೆದುಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ 47ಕ್ಕೂ ಹೆಚ್ಚು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಲಾಗಿದೆ.
ಮಧ್ಯ ಪ್ರದೇಶದಲ್ಲಿ 32 ಶಾಸಕರನ್ನು ಸೆಳೆದು ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಕ್ಕೆ ಅಗತ್ಯ ಇರುವುದು ಎಲ್ಲಾ ಲೆಕ್ಕಾಚಾರಗಳ ಬಳಿಕ 24 ಶಾಸಕರು ಮಾತ್ರ. ಹೀಗಾಯೇ ತೆರೆಮರೆಯ ಚಟುವಟಿಕೆಗಳು ಬಿರಿಸುಗೊಂಡಿವೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೇಪಥ್ಯಕ್ಕೆ ಸರಿದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಹೆಚ್ಚು ಸಕ್ರಿಯವಾಗಿದ್ದಾರೆ.
ಅದು ಕೂಡ ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಎಳ್ಳು ನೀರು ಬಿಡಬಹುದು ಎಂಬ ಲೆಕ್ಕಾಚಾರಗಳು ಉಲ್ಟಾ ಆಗುತ್ತಿದ್ದು, ಚುನಾವಣೆಗೂ ಮುನ್ನವೇ ಕಾರ್ಯಚರಣೆಗಳು ಬಿರಿಸು ಪಡೆದಿರುವುದು ಕಾಂಗ್ರೆಸಿಗರಿಗೆ ಆತಂಕ ಮೂಡಿಸಿವೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೆ ನಿನ್ನೆ ರಾತ್ರಿ ಗೃಹ ಸಚಿವ ಪರಮೇಶ್ವರ್ ಅವರ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಬೋಜನಕೂಟ ನಡೆಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.