ಚಿಕ್ಕಮಗಳೂರು,ಸೆ.24-ರೌಡಿ ಶೀಟರ್‌ಗಳ ಜೊತೆ ಸೇರಿ ಮದ್ಯಪಾನ ಕೂಟ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ವೀರೇಂದ್ರ ನನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿವರ: ಸುಮಾರು ಒಂದು ವಾರದ ಹಿಂದೆ ಕಡೂರು ತಾಲೂಕಿನ ಎಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದ ಬಾರ್‌ವೊಂದರಲ್ಲಿ ಎಎಸ್‌ಐ ವೀರೇಂದ್ರ ರೌಡಿ ಶೀಟರ್‌ಗಳೊಂದಿಗೆ ಪಾರ್ಟಿ ಆಯೋಜಿಸಿದ್ದರು. ಅಷ್ಟೇ ಅಲ್ಲದೆ, ತಡರಾತ್ರಿಯವರೆಗೂ ದೊಡ್ಡ ಶಬ್ದದಲ್ಲಿ ಹಾಡುಗಳನ್ನು ಹಾಕಿಕೊಂಡು ಮೋಜು-ಮಸ್ತಿಯಲ್ಲಿ ತೊಡಗಿದ್ದರು.
ಪೋಲಿಸ್ ಅಧಿಕಾರಿಯ ಈ ದುಂಡಾವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಹಾಗೂ ನೂರಾರು ಮಹಿಳೆಯರು ತಡರಾತ್ರಿಯೇ ಬಾರ್ ಎದುರು ಧರಣಿ ಕುಳಿತರು. ನಿಗದಿತ ಸಮಯ ಮೀರಿದರೂ ತೆರೆದಿದ್ದ ಬಾರ್ ಅನ್ನು ತಕ್ಷಣವೇ ಬಂದ್ ಮಾಡಬೇಕೆಂದು ಪಟ್ಟು ಹಿಡಿದು ಭಾರಿ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಅಧಿಕಾರಿಯೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವುದರ ವಿರುದ್ಧ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಜೊತೆಗೆ ಈ ಎಎಸ್‌ಐ ವಿರುದ್ಧ ನಿರಂತರವಾಗಿ ದೂರುಗಳು ಕೇಳಿಬರುತ್ತಿದ್ದವು. ಸಾರ್ವಜನಿಕರ ಭಾರಿ ಪ್ರತಿಭಟನೆ ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಜಿತೇಂದ್ರ ಕುಮಾರ್ ಎಎಸ್‌ಐ ವೀರೇಂದ್ರ ನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
