ನಂಜನಗೂಡು, ಸೆ.24- ತಾಲೂಕಿನ ಘಟ್ಟವಾಡಿ ಗ್ರಾಮದಲ್ಲಿ ಎರಡು ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆಯಾಗಿದ್ದು, ಬೇರೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಘಟ್ಟವಾಡಿ ಗ್ರಾಮದ ಸರ್ವೇ ನಂ. 286ರ ಸರ್ಕಾರಿ ಕೆರೆ ಸಮೀಪದ ಮುಳ್ಳು ಪೊದೆಯಲ್ಲಿ ಸುಮಾರು ಎರಡು ವರ್ಷದ ಹೆಣ್ಣು ಹುಲಿಯ ಮೃತದೇಹ ಪತ್ತೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ವಿಷಯ ತಿಳಿದು ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹುಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿಗೆ ರವಾನಿಸಲಾಯಿತು.
ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಮಾತನಾಡಿ, ಹುಲಿಯ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಮೇಲ್ನೋಟಕ್ಕೆ ಎರಡು ಹುಲಿಗಳ ನಡುವೆ ಕಾದಾಟ ನಡೆದು ಸಾವನ್ನಪ್ಪಿರಬಹುದು ಎಂಬ ಶಂಕೆ ಇದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ವಾಸ್ತವಾಂಶ ತಿಳಿಯಲಿದೆ. ಘಟನೆಯ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ಸ್ಥಳಕ್ಕೆ ಡಿಎಫ್‌ಒ ಸಿ. ಪರಮೇಶ್, ಎಫ್‌ಒ ರವಿಶಂಕರ್, ವಲಯ ಅರಣ್ಯಾಧಿಕಾರಿ ನಿತಿನ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರು ಭೇಟಿ ನೀಡಿದ್ದರು.
