ತುಮಕೂರು,ಏ.21- ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರೊಂದು ಹರಿದ ಪರಿಣಾಮ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ರಾಘವೇಂದ್ರ ಟೆಕ್ಸ್ ಟೈಲ್ ಜವಳಿ ಅಂಗಡಿಯ ಮಾಲೀಕ ಮೋಹನ್ ಕುಮಾರ್ ಅವರ ಮಗ ಶೋಭಿತ್ ರಾಘವ್(13) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ನಿಟ್ಟೂರು ಗ್ರಾಮದಲ್ಲಿ ಬಟ್ಟೆ ವ್ಯಾಪಾರ ನಡೆಸುವ ಮೊಹನ್ ಕುಮಾರ್ ಅವರು ಮಗನಿಗೆ ಶಾಲೆಗೆ ರಜೆ ಇದ್ದ ಕಾರಣ ಅಂಗಡಿಗೆ ಕರೆದುಕೊಂಡು ಬಂದಿದ್ದರು. ಅಂಗಡಿಯ ಮುಂದೆ ತನ್ನ ಸೈಕಲ್ನಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಯಮ ಸ್ವರೂಪಿಯಾಗಿ ಬಂದ ಕಾರು ಏಕಾಏಕಿ ಬಾಲಕನ ಮೇಲೆ ಹರಿದಿದೆ.
ತೀವ್ರ ಗಾಯಗೊಂಡ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಬ್ಬಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಧಾವಿಸಿದ ಗುಬ್ಬಿ ಠಾಣೆ ಪೊಲೀಸರು ಕಾರು ಚಾಲಕನ ವಿರುದ್ಧ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
