ಮಂಡ್ಯ,ಜೂ.24: ಕೃಷಿ ಉತ್ಪನ್ನ ಸಾಗಿಸುವ ವಾಹನಗಳಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ರೈತರು, ಮಹಿಳಾ ಹಾಗೂ ಕನ್ನಡಪರ ಸಂಘಟನೆಗಳು ಗಣಂಗೂರು ಟೋಲ್ ಪ್ಲಾಜಾ ಬಳಿ ಬೃಹತ್ ಧರಣಿ ನಡೆಸಿದವು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಟೋಲ್‌ಗೆ ಮುತ್ತಿಗೆ ಹಾಕಿ, ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ಜಮೀನು ಕಿತ್ತುಕೊಂಡು ಮತ್ತೆ ಸುಂಕವೇ? :
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಎನ್‌ಎಚ್‌ಎಐ ಉಸ್ತುವಾರಿ ಅಧಿಕಾರಿ ದೇವಿಕ್ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ನಮ ಜಮೀನಿನ ಮೇಲೆ ರಸ್ತೆ ಮಾಡಿ ಇನ್ನೂ ಸರಿಯಾದ ಪರಿಹಾರ ಕೊಟ್ಟಿಲ್ಲ. ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಿದ್ದೇವೆ. ಮತ್ತೆ ಟೋಲ್ ಹೆಸರಲ್ಲಿ ಸುಲಿಗೆ ಏಕೆ? ಹಣ್ಣು, ತರಕಾರಿ, ಕಬ್ಬು, ಭತ್ತ, ತೆಂಗು, ಅಡಿಕೆ ಸಾಗಿಸುವ ರೈತರ ವಾಹನಗಳಿಗೆ ತಕ್ಷಣ ವಿನಾಯಿತಿ ನೀಡಿ ಎಂದು ಆಗ್ರಹಿಸಿದರು.
ಪಂಜಾಬ್ ಸರ್ಕಾರ ಟೋಲ್‌ಗಳನ್ನೇ ರದ್ದು ಮಾಡಿದೆ. ಕರ್ನಾಟಕದಲ್ಲೂ ಅದೇ ಮಾದರಿ ಜಾರಿಯಾಗಬೇಕು. 20 ಕಿ.ಮೀ ವ್ಯಾಪ್ತಿಯ ರೈತರಿಂದ ಒಂದು ರೂಪಾಯಿ ಸುಂಕ ತೆಗೆದುಕೊಳ್ಳಬಾರದು ಎಂದು ಕುರುಬೂರು ಶಾಂತಕುಮಾರ್ ಸ್ಪಷ್ಟಪಡಿಸಿದರು.
ಮೂಲಸೌಕರ್ಯ ಇಲ್ಲ, ಸುಂಕ ವಸೂಲಿ ಹೇಗೆ? :
ನಿಯಮದಂತೆ ಸರ್ವಿಸ್ ರಸ್ತೆ ಇಲ್ಲ, ಅಂಡರ್‌ಪಾಸ್‌ನಲ್ಲಿ ದೀಪಗಳಿಲ್ಲ. ವಿದ್ಯಾರ್ಥಿಗಳು, ರೈತರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಮೂಲಸೌಕರ್ಯ ಕಲ್ಪಿಸದೆ ಸುಂಕ ವಸೂಲಿ ಕಾನೂನುಬಾಹಿರೞೞ ಎಂದು ರೈತ ಮುಖಂಡರು ಆಕ್ರೋಶ ವ್‌ಯಕ್ತಪಡಿಸಿದರು. ಟೋಲ್ ಸಿಬ್ಬಂದಿಯ ದುರ್ವರ್ತನೆಗೂ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಅಧಿಕಾರಿಯಿಂದ ಸದ್ಯಕ್ಕೆ ರಿಲೀಫ್ :
ರೈತರ ಆಕ್ರೋಶಕ್ಕೆ ಮಣಿದ ಅಧಿಕಾರಿ ದೇವಿಕ್, ಇಂದಿನಿಂದಲೇ ಟೋಲ್ ಬಳಿ ಪ್ರತ್ಯೇಕ ಲೇನ್ ಮಾಡಿ ಕೃಷಿ ಸರಕು ವಾಹನಗಳಿಗೆ ತಡೆರಹಿತ ಸಂಚಾರಕ್ಕೆ ಅವಕಾಶ ನೀಡುತ್ತೇವೆ. ನಿಮ ಎಲ್ಲ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಒಂದು ತಿಂಗಳಲ್ಲಿ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದು ಲಿಖಿತ ಭರವಸೆ ನೀಡಿದರು. ಇದರೊಂದಿಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ತಿಂಗಳ ಗಡುವು, ಇಲ್ಲದಿದ್ದರೆ ಟೋಲ್ ಕಿತ್ತೆಸೆಯುತ್ತೇವೆ :
ಇದು ಕೊನೆಯ ಎಚ್ಚರಿಕೆ. 20 ಕಿ.ಮೀ ವ್ಯಾಪ್ತಿಯ ರೈತರಿಗೆ ಸಂಪೂರ್ಣ ಸುಂಕ ವಿನಾಯಿತಿ, ಸಿಬ್ಬಂದಿ ದೌರ್ಜನ್ಯ ನಿಲ್ಲಿಸಿ, ಮೂಲಸೌಕರ್ಯ ಕಲ್ಪಿಸಿ. ಒಂದು ತಿಂಗಳಲ್ಲಿ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಿ ಟೋಲ್ ಗೇಟ್‌ಗಳನ್ನೇ ಕಿತ್ತೆಸೆಯುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಿಂಡವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇ ಶ್‌ಗೌಡ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ರಾಜ್ಯ ಸಂಘಟನಾ ಕಾವ್‌ಯದರ್ಶಿ ಹತ್ತಳ್ಳಿ ದೇವರಾಜ್, ತಿರಗಸೂರು ಶಂಕರ್, ಬಡಗಲಪುರ ನಾಗರಾಜ್, ಸರಗೂರು ನಟರಾಜು ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
