ಬೆಂಗಳೂರು, ಆ.10- ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಜ್ಯದ ಗಡಿ ಭಾಗದಲ್ಲಿ ಮಾಡುವುದರಿಂದ ಏನು ಉಪಯೋಗವಾಗುತ್ತದೆ ಎಂದು ಪ್ರಶ್ನಿಸುವ ಮೂಲಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸೋಮಣ್ಣ ಅವರು 2ನೇ ಏರ್ಪೋರ್ಟ್ ತುಮಕೂರಿನಲ್ಲೇ ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ನಾನು ಈ ಬಗ್ಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ತಾಂತ್ರಿಕವಾಗಿ ಮತ್ತು ಅದರ ಉಪಯೋಗ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದನ್ನು ನೋಡಬೇಕಾಗುತ್ತದೆ.
ತುಮಕೂರಿನಲ್ಲೇ ಆದರೆ 20 ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲು ಸುಲಭವಾಗುತ್ತದೆ. ಆದರೆ ಡಿಜಿಸಿಎ ನವರು ತಾಂತ್ರಿಕವಾಗಿ ಇದು ಸಾಧ್ಯನಾ ಇಲ್ಲವಾ ಎಂಬುದರ ಬಗ್ಗೆ ಪರಿಶೀಲಿಸುತ್ತಾರೆ ಎಂದು ತಿಳಿಸಿದರು.
ಬಿಡದಿಯ ಬಳಿ ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿಲ್ಲ ಎಂದು ಈ ಮೊದಲು ತಾಂತ್ರಿಕ ಸಮಿತಿ ನಿರಾಕರಣೆ ಮಾಡಿತ್ತು. ಈಗ ಮತ್ತೆ ಅಲ್ಲಿಯೇ ವಿಮಾನ ನಿಲ್ದಾಣ ಮಾಡಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ತುಮಕೂರಿನ ಶಿರಾ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪಕ್ಷಾತೀತವಾಗಿ ಮೊದಲಿನಿಂದಲೂ ಒತ್ತಡ ಹೇರಲಾಗುತ್ತಿದೆ ಎಂದರು.
ನೈಸ್ ರದ್ದು ಮಾಡುವುದಿಲ್ಲ:
ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ಟೋಲ್ ಕಟ್ಟಬೇಡಿ ಎಂದು ಜನರಿಗೆ ಕರೆ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದೇನೂ ಹೊಸತಲ್ಲ, ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಆದಷ್ಟು ಬೇಗ ಪ್ರಾಜೆಕ್ಟ್ ಅನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ.
ನನ್ನನ್ನೇ ಉಪಸಮಿತಿಯ ಅಧ್ಯಕ್ಷನಾಗಿ ಮುಂದುವರೆಸಿದ್ದಾರೆ. ಈಗಾಗಲೇ 7-8 ಸಭೆಗಳನ್ನು ಮಾಡಿದ್ದೇನೆ. ಅಲ್ಲಿ ಎ, ಬಿ, ಸಿ ಎಂದು ಮೂರು ವಿಭಾಗಗಳನ್ನು ಮಾಡಿದ್ದೇವೆ. ಬಿಡದಿ ವರೆಗೂ ಎ ಭಾಗ, ಮುಂದಕ್ಕೆ ಬಿ, ಮೈಸೂರು ಹತ್ತಿರಕ್ಕೆ ಸಿ ವಿಭಾಗವನ್ನಾಗಿ ವಿಂಗಡಿಸಲಾಗಿದೆ. ಅಲ್ಲಿ ಯಾವ ರೀತಿಯ ಸಮಸ್ಯೆಗಳು ಆಗಿವೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರಿಗೆ ನಿವೇಶನ ನೀಡುವುದು, ಭೂಮಿ ಸಮರ್ಪಕ ಬಳಗೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಎಷ್ಟನ್ನು ಹಿಂಪಡೆಯಬೇಕು ಎಂಬೆಲ್ಲಾ ವಿಚಾರಗಳನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದರು.
ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ. ಯೋಜನೆಯನ್ನು ರದ್ದು ಪಡಿಸುವುದು ಅದರಲ್ಲಿ ಒಂದು, ಇಷ್ಟು ವರ್ಷಗಳ ನಂತರ ಯೋಜನೆಯನ್ನು ನಿಲ್ಲಿಸಲು ಆಗುವುದಿಲ್ಲ. ಈಗ ಯೋಜನೆ ರದ್ದುಗೊಳಿಸಿದರೆ, ಇಷ್ಟು ವರ್ಷ ಯಾವ ಪುರುಷಾರ್ಥಕ್ಕೆ ಯೋಜನೆ ನಡೆಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ರದ್ದುಗೊಳಿಸುವ ಬದಲು, ಕಾನೂನು ಚೌಕಟ್ಟಿನಲ್ಲಿ ಇದೆಲ್ಲದರ ಬಗ್ಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಯೋಜನೆ ಪೂರ್ಣಗೊಳಿಸಲು 23 ಸಾವಿರ ಎಕರೆ ಭೂಮಿ ನೀಡಬೇಕು ಎಂಬ ಷರತ್ತು ಇದೆ. ಈಗ ನೀಡಿರುವ ಭೂಮಿಯಲ್ಲಾಗಿರುವ ಉಪಯೋಗ, ದುರುಪಯೋಗದ ಬಗ್ಗೆ ಮುಂದೆ ಪರಿಶೀಲನೆ ಮಾಡಲಾಗುತ್ತದೆ. ಈಗ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂಬುದು ನಮ ಮುಂದಿರುವ ಆಯ್ಕೆ ಎಂದು ಹೇಳಿದರು.
ಬಿಡದಿ ವಿಚಾರವಾಗಿ ಬಿಜೆಪಿ/ಜೆಡಿಎಸ್ ಪಾದಯಾತ್ರೆ ಕೈಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಮಾಡಲು ಅವರಿಗೆ ಹಕ್ಕಿದೆ, ಮಾಡಲಿ. ಆರ್ಟಿಫೀಶಿಯಲ್ ಇಂಟಲಿಜೆನ್್ಸನ ದೊಡ್ಡ ಸೆಂಟರ್ ಅನ್ನೇ ಅಲ್ಲಿ ಮಾಡುವ ಪ್ರಸ್ತಾವನೆ ಇರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಿರುವಾಗ ವಿಪಕ್ಷದವರು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಉತ್ತಮ ಎಂದರು.
ತುಮಕೂರಿನ ಕೆಲವು ತಾಲೂಕುಗಳಲ್ಲಿ ಇನ್ನೂ ಮಳೆಯಾಗದೇ ಇರುವುದರಿಂದ ಗಂಭೀರ ಬರ ಪರಿಸ್ಥಿತಿ ಎದುರಾಗಿದೆ. ಇಂದು ಮತ್ತು ನಾಳೆ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಲಿದ್ದೇನೆ. ಈಗಾಗಲೇ ಮುಖ್ಯಮಂತ್ರಿಗಳು ಮತ್ತು ನಾನು 3 ವಿಭಾಗಗಳನ್ನು ಮಾಡಿ, ಪ್ರತಿಯೊಂದು ತಾಲೂಕಿನ ಬರ ಪರಿಸ್ಥಿತಿ ಹೇಗಿದೆ ಎಂದು ಅವಲೋಕನೆ ಮಾಡಿದ್ದೇವೆ.
ನಾನು ನಾಲ್ಕೈದು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದೇನೆ. ತುಮಕೂರು ಜಿಲ್ಲೆಯದ್ದೂ ಮಾಡಿದ್ದೆ. ಆದರೆ, ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ಸೇರಿದಂತೆ ಇನ್ನೂ ಕೆಲವು ತಾಲೂಕುಗಳಲ್ಲಿ ಗಂಭೀರ ಬರ ಪರಿಸ್ಥಿತಿ ಏರ್ಪಟ್ಟಿದ್ದು, ಇಂದು ಮತ್ತು ನಾಳೆ ಅಲ್ಲಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದರು.
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಬಿಟ್ಟರೆ ಬೇರೆ ಯಾವುದೇ ಕಡೆಗಳಲ್ಲಿ ಹೇಳುವಷ್ಟು ಮಳೆಯಾಗಿಲ್ಲ. ಕೆಆರ್ಎಸ್, ಕಬಿನಿ ಜಲಾಶಯಗಳಲ್ಲಿ ನೀರು ಕೊಂಚ ಹೆಚ್ಚಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ್ದರಿಂದ ಉತ್ತರ ಕರ್ನಾಟಕದ ಆಲಮಟ್ಟಿ,, ನಾರಾಯಣಪುರ ಡ್ಯಾಂಗಳು ಸ್ವಲ್ಪ ಮಟ್ಟಿಗೆ ತುಂಬಿವೆ. ಆದರೆ, ಬಯಲು ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ಇದೆ. ಹೀಗಾಗಿ ಬರ ಪರಿಸ್ಥಿತಿಯ ಸಂಪೂರ್ಣ ಅವಲೋಕನ ನಡೆಸುತ್ತೇವೆ. ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಸದನದಲ್ಲೂ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದರು.
ಖಾತೆ ಹಂಚಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೊಂದಲ ಅಂತೇನಿಲ್ಲ, ಮುಖ್ಯಮಂತ್ರಿಗಳು ನಿನ್ನೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿದ್ದಾರೆ. ಹೊಸದಾಗಿ ಸಚಿವರು ಆದವರಿಗೆ ಪ್ರಾರಂಭದಲ್ಲಿ ಗೊಂದಲಗಳು ಆಗುವುದು ಸಹಜ. ನಂತರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿವರಣೆಯನ್ನು ನೀಡುತ್ತಾರೆ. ನಮಗೂ ಕೂಡ ಮೊದಲ ಬಾರಿ ಮಂತ್ರಿಯಾದಾಗ ಹಾಗೆಯೇ ಆಗಿತ್ತು. ಸದನದಲ್ಲೂ ಉತ್ತರ ನೀಡಲು ಅವರು ಸಮರ್ಥರಿದ್ದಾರೆ. ಯಾವುದೇ ರೀತಿಯಲ್ಲೂ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
