Homeಜಿಲ್ಲಾ ಸುದ್ದಿಗಳುಕೊರಟಗೆರೆ ತಾಲ್ಲೂಕಿನ ಗೌಜಗಲ್ಲು ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಆತಂಕದಲ್ಲಿ ಗ್ರಾಮಸ್ಥರು

ಕೊರಟಗೆರೆ ತಾಲ್ಲೂಕಿನ ಗೌಜಗಲ್ಲು ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಆತಂಕದಲ್ಲಿ ಗ್ರಾಮಸ್ಥರು

Leopard reappears in Goujagallu village of Koratagere taluk, villagers in panic

ಕೊರಟಗೆರೆ,ಜೂ.24- ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಚಿರತೆಯ ಹಾವಳಿ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಅನೇಕ ಬಾರಿ ಚಿರತೆ ಕಾಣಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿ ಚಿರತೆಯೊಂದು ನಾಯಿಯನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆಯು ನಾಯಿಯೊಂದನ್ನು ಬೇಟೆಯಾಡಲು ಸನ್ನದ್ಧವಾಗಿದ್ದ ವೇಳೆ, ಕೊರಟಗೆರೆ ಕಡೆಯಿಂದ ಕಾರಿನಲ್ಲಿ ಮನೆಗೆ ಬರುತ್ತಿದ್ದ ಸ್ಥಳೀಯ ಯುವಕರು ಅದನ್ನು ಗಮನಿಸಿದ್ದಾರೆ. ಚಿರತೆಯ ಚಲನವಲನಗಳನ್ನು ಗಮನಿಸುತ್ತಿದ್ದಾಗ ಅದು ನಾಯಿಯ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲಾಗಿದೆ.

ಗ್ರಾಮಸ್ಥರ ಮಾಹಿತಿಯಂತೆ, ಮೂರು ದಿನಗಳ ಹಿಂದೆ ಗೌಜಗಲ್ಲು ಗ್ರಾಮದ ರೈತ ಗೋವಿಂದರಾಜು ಅವರಿಗೆ ಸೇರಿದ ಮೂರು ಮೇಕೆಗಳನ್ನು ಇದೇ ಚಿರತೆ ಕೊಂದಿತ್ತು. ಇದಕ್ಕೂ ಮುನ್ನ ಸುಮಾರು 20 ದಿನಗಳ ಹಿಂದೆ ಕುರಿ ಹಾಗೂ ಮೇಕೆಗಳ ಮೇಲೆ ದಾಳಿ ನಡೆಸಿದ ಘಟನೆಗಳು ವರದಿಯಾಗಿವೆ. ಹೀಗಾಗಿ ಗ್ರಾಮಸ್ಥರು ನಿರಂತರ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಕಳೆದ 20 ದಿನಗಳಿಂದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದ್ದರೂ ಇದುವರೆಗೆ ಯಶಸ್ಸು ಸಿಕ್ಕಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸಿದ್ದರಬೆಟ್ಟ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ, ಕರಡಿ, ಕಾಡುಹಂದಿ ಸೇರಿದಂತೆ ವಿವಿಧ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳ ಜೀವಹಾನಿ ಹಾಗೂ ಬೆಳೆ ನಷ್ಟ ನಿರಂತರವಾಗಿ ಸಂಭವಿಸುತ್ತಿದೆ. ಕಾಡುಪ್ರಾಣಿಗಳ ದಾಳಿಯಿಂದ ಗ್ರಾಮಸ್ಥರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿರತೆಯನ್ನು ಶೀಘ್ರ ಸೆರೆಹಿಡಿದು ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

RELATED ARTICLES

Latest News