ಮೈಸೂರು,ಅ.12-ಸಾಂಸ್ಕೃತಿಕ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವಾರದ ಅಂತರದಲ್ಲಿ ನಾಲ್ಕನೇ ಕೊಲೆ ಪ್ರಕರಣ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ. ಘಟನೆ ವಿವರ: ನಿನ್ನೆ ರಾತ್ರಿ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರದ ಸುಣ್ಣದಕೇರಿ ನಿವಾಸಿ ಅಫ್ರಿದಿ ಕೊಲೆಯಾದ ದುರ್ದೈವಿ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯೊಬ್ಬಳೊಂದಿಗಿನ ಪ್ರೇಮ ವಿಚಾರವೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಯುವತಿಯ ಅಣ್ಣನೇ ತನ್ನ ತಂಗಿಯ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿ, ಅಫ್ರಿದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಸುದ್ದಿ ತಿಳಿದು ಸ್ಥಳಕ್ಕೆ ಎನ್ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆ.ಆರ್. ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಒಂದುವಾರದಂದೀಚೆಗೆ ನಗರದಲ್ಲಿ ನಾಲ್ಕು ಕೊಲೆ ಪ್ರಕರಣಗಳು ನಡೆದಿರುವುದು ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.
