ತೀರ್ಥಹಳ್ಳಿ,ಫೆ.20- ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ದಾವಣಗೆರೆ ಮೂಲದ 81 ವಷರ್ದ ವೃದ್ಧೆಯೊಬ್ಬರ ಹೊಟ್ಟೆಯಲ್ಲಿದ್ದ 40 ಸೆಂ.ಮೀ ಗಾತ್ರದ ಸುಮಾರು 6 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆರವುಗೊಳಿಸಿ ಯಶಸ್ವಿಯಾಗಿದ್ದಾರೆ.
ಹೃದಯ ಸಂಬಂಧಿತ ಸಮಸ್ಯೆ, ಕ್ಯಾನ್ಸರ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ವೃದ್ಧೆಗೆ ಸಮಗ್ರ ವೈದ್ಯಕೀಯ ತಯಾರಿ ಮತ್ತು ತಜ್ಞರ ತಂಡದ ಸಮನ್ವಯದಿಂದ ಸಂಕೀರ್ಣ ಸ್ಟೇಜಿಂಗ್ ಲ್ಯಾಪರೋಟಮಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಯುಷಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ. ರೋಗಿಯ ಕುಟುಂಬಕ್ಕೆ ಯಾವುದೇ ಆರ್ಥಿಕ ಹೊರೆಯಾಗಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಸುರೇಶ್ ರಾವ್ ತಿಳಿಸಿದರು.
ಈ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಕ್ಲೆಮೆಂಟ್ ಡಿೞಸೌಜಾ ಅವರ ಮಾರ್ಗದರ್ಶನದಲ್ಲಿ ಡಾ. ದಿವ್ಯ ಜ್ಯೋತಿ ನಡೆಸಿದರು. ರೋಗಿಯ ಮಗ ಮಂಜಣ್ಣನವರು ಈ ಸಂದರ್ಭದಲ್ಲಿ ಮಾತನಾಡುತ್ತ ಅತ್ಯಂತ ಕ್ಲಿಷ್ಟವಾದ ನಮ ತಾಯಿಯವರ ಆರೋಗ್ಯವನ್ನು ಅತ್ಯಂತ ಜಾಗೂರಕತೆಯಿಂದ ಶಸ್ತ್ರಚಿಕಿತ್ಸೆಯ ಮಾಡಿದ ವೈದ್ಯರಿಗೆ ಧನ್ಯವಾದವನ್ನು ತಿಳಿಸಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸುರೇಶ್ ರಾವ್ ಮಾತನಾಡಿ, ಇಂತಹ ದೊಡ್ಡ ಶಸ್ತ್ರಚಿಕಿತ್ಸೆ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ, ಪ್ರೋಟೋಕಾಲ್ ಆಧಾರಿತ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಾಧ್ಯವೆಂಬುದನ್ನು ಎಮ್.ಐ.ಒ ಸಾಬೀತುಪಡಿಸಿದೆ. ನಗರ ಮಟ್ಟದ ಚಿಕಿತ್ಸೆ ಈಗ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿದೆ, ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಒದಗಿಸುವತ್ತ ಎಮ್.ಐ.ಒ. ತೀರ್ಥಹಳ್ಳಿ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ ಎಂಬುದು ಈ ಶಸ್ತ್ರಚಿಕಿತ್ಸೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.
