ಹಾಸನ, ಮೇ 31- ಡೆತ್‌ನೋಟ್ ಬರೆದಿಟ್ಟು ಉಪ ತಹಸೀಲ್ದಾರ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿಎಂ ರಸ್ತೆಯ ಖಾಸಗಿ ಲಾಡ್ಜ್‌ನಲ್ಲಿನಡೆದಿದೆ. ತಿಮಯ್ಯ (52) ಆತ್ಮಹತ್ಯೆ ಮಾಡಿಕೊಂಡ ಉಪ ತಹಸೀಲ್ದಾರ್.
ಮೂಲತಃ ಕೊಡಗು ಜಿಲ್ಲೆಯವರಾದ ತಿಮಯ್ಯ ಅವರು ಹಾಸನ ನಗರದ ಚನ್ನಪಟ್ಟಣ ಬಡಾವಣೆಯ ದ್ಯಾವಮ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ನಿನ್ನೆ ಬೆಳಿಗ್ಗೆ ಸುಮಾರು 11.30ಕ್ಕೆ ಬಿಎಂ ರಸ್ತೆಯಲ್ಲಿರುವ ಲಾಡ್‌್ಜವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು.ಸಂಜೆಯಾದರೂ ಕೊಠಡಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ರಾತ್ರಿ ಸುಮಾರು 8.30ರ ವೇಳೆಗೆ ಬಾಗಿಲಿನ ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಅವರು ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಆತಹತ್ಯೆಗೂ ಮುನ್ನ ತಿಮ್ಮಯ್ಯ ಅವರು ನಾಲ್ಕು ಪುಟಗಳ ಡೆತ್‌ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.ಡೆತ್‌ನೋಟ್‌ನಲ್ಲಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.
