ಬೆಂಗಳೂರು,ಜೂ.25-ಒಂದೇ ಬೈಕ್ನಲ್ಲಿ ಮೂವರು ಯುವಕರು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಕೆಕೆಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರೂ ದಾರುಣವಾಗಿ ಮೃತಪಟ್ಟಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಮೃತಪಟ್ಟ ಯುವಕರನ್ನು ಬೊಮನಹಳ್ಳಿ ಗ್ರಾಮದ ದೇವರಾಜ (19), ಮುಡಬೂಳ ಗ್ರಾಮದ ಲಕ್ಷ್ಮೀಕಾಂತ (20) ಹಾಗೂ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದ ಪ್ರಕಾಶ್ (23) ಎಂದು ಗುರುತಿಸಲಾಗಿದೆ.
ಈ ಮೂವರು ಯುವಕರು ರಾತ್ರಿ 7.30 ರ ಸುಮಾರಿನಲ್ಲಿ ಬೊಮನಹಳ್ಳಿ ಕಡೆಯಿಂದ ಚಿತ್ತಾಪುರ ಕಡೆಗೆ ಒಂದೇ ಬೈಕ್ನಲ್ಲಿ ಹೋಗುತ್ತಿದ್ದರು. ಅದೇ ಸಂದರ್ಭದಲ್ಲಿ ಚಿತ್ತಾಪುರದಿಂದ ಸನ್ನತಿ ಕಡೆಗೆ ಬರುತ್ತಿದ್ದ ಸಾರಿಗೆ ಬಸ್ ಕರಾದಾಳ ಗ್ರಾಮ ಸಮೀಪದ ಚಿತ್ತಾಪುರ ಬಳಿ ಇವರ ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಕೆಳಗೆ ಬಿದ್ದಾಗ ಅವರ ಮೇಲೆಯೇ ಬಸ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್ , ಚಿತ್ತಾಪುರ ಸಿಪಿಐ ಪಾಟೀಲ್ ಮತ್ತು ಪಿಎಸ್ಐ ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೂವರು ಯುವಕರ ಮೃತದೇಹಗಳನ್ನು ಚಿತ್ತಾಪುರ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಚಿತ್ತಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
