ತುಮಕೂರು,ಜು.22- ಲಾಟರಿ ಬೆಳೆ ಎಂದೇ ಕರೆಯಲಾಗುವ ಟೊಮ್ಯಾಟೊ ಬೆಲೆ ಕುಸಿತವಾಗಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮೊದಲೇ ಮುಂಗಾರು ಮಳೆ ಕೈಕೊಟ್ಟಿದ್ದು, ನೀರಾವರಿ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಒಂದು ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಳಿತವಾಗುವ ಟೊಮ್ಯಾಟೊಗೆ ಯಾವ ಸಮಯದಲ್ಲಿ ಬೆಲೆ ಬರುತ್ತದೋ, ಇಳಿಯುತ್ತದೋ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಹೆಚ್ಚಾಗಿ ಟೊಮ್ಯಾಟೊ ಬೆಳೆಯುವ ಪ್ರದೇಶಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಾಟಿ ಮಾಡಲಾಗಿದ್ದ ಬೆಳೆಗೆ ಉತ್ತಮ ಫಸಲು ಬಂದಿದೆಯಾದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ.
ಏಷ್ಯಾದಲ್ಲೇ ಟೊಮ್ಯಾಟೊ ಮಾರುಕಟ್ಟೆಯಾದ ಕೋಲಾರ ಎಪಿಎಂಸಿಯಲ್ಲಿ 15 ಕೆಜಿ ಒಳಗೊಂಡ ಒಂದು ಕ್ರೇಟ್‌ಗೆ 100 ರಿಂದ 150 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆಯಾಗಿ ಬೆಂಗಳೂರಿನಲ್ಲಿ ನಾಟಿ ಟೊಮ್ಯಾಟೊ ಕೆಜಿಗೆ 8 ರಿಂದ 10 ರೂ. ಗೆ ಮಾರಾಟವವಾಗುತ್ತಿದೆ.
ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಟೊಮ್ಯಾಟೊ ರಫ್ತು ಆಗದ ಕಾರಣ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾಲು ಬರುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಬೆಲೆ ಇಳಿಕೆಗೆ ಕಾರಣವಾಗಿದೆ. ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಕಾರಣ ಸಾಕಷ್ಟು ರೈತರು ಕಟಾವು ಮಾಡದೇ ಜಮೀನಿನಲ್ಲಿ ಹಾಗೆಯೇ ಬಿಟ್ಟಿದ್ದಾರೆ.
ಟೊಮ್ಯಾಟೊ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಸಹ ಕೇಳುವವರಿಲ್ಲದೆ ಕಡಿಮೆ ಬೆಲೆಗೆ ಕೊಟ್ಟುಬರುವಂತಾಗಿದೆ. ಇದರಿಂದ ಕೂಲಿ, ಸಾಗಾಟದ ವೆಚ್ಚವೂ ಕೂಡಾ ಬಾರದಂತಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
