ಮೈಸೂರು,ನ.9- ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರನ್ನು ಸ್ವಾಗತ ಭಾಷಣದಲ್ಲಿ ಹೇಳದ್ದಕ್ಕೆ ಗಲಾಟೆ ನಡೆದ ವಿಚಾರ ಇದೀಗ ಕೊಲೆ ಬೆದರಿಕೆ ಆರೋಪದೊಂದಿಗೆ ಹೊಸ ತಿರುವು ಪಡೆದಿದೆ. ನ.6 ರಂದು ನಗರದ ಟೌನ್ ಹಾಲ್ ಆವರಣದಲ್ಲಿ ಬಿಜೆಪಿಯ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಸಂದೇಶದೊಂದಿಗೆ ಬೃಹತ್ ಸಮಾವೇಶ ಹಾಗೂ ಪಾದಯಾತ್ರೆ ನಡೆದಿತ್ತು. ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡಿದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಹೇಳದೇ ಉಳಿದ ನಾಯಕರ ಹೆಸರನ್ನು ಹೇಳಿ ಸ್ವಾಗತ ಭಾಷಣ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ನಾಗೇಂದ್ರ ಬಳಿ ತೆರಳಿ ಪ್ರತಾಪ್ ಸಿಂಹ ಹೆಸರನ್ನು ಹೇಳುವಂತೆ ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ಅಷ್ಟರಲ್ಲಿ ವೇದಿಕೆ ಮುಂಭಾಗಕ್ಕೆ ಬಂದು ಪ್ರತಾಪ್ ಸಿಂಹ ಹೆಸರು ಹೇಳುವಂತೆ ಬಿಜೆಪಿ ಕಾರ್ಯಕರ್ತ ರಾಜಚಾರಿ ಗಲಾಟೆ ಮಾಡಿದ್ದಾರೆ. ಪೊಲೀಸರು ರಾಜಚಾರಿಯನ್ನು ವೇದಿಕೆಯಿಂದ ಹೊರಗೆ ಕಳುಹಿಸಿದ್ದಾರೆ.
ಸಮಾವೇಶ ಮುಗಿದ ಬಳಿಕ ಮೈಸೂರು ವಿಮಾನ ನಿಲ್ದಾಣದ ಬಳಿ ರಾಜಚಾರಿಯನ್ನು ಅಡ್ಡಗಟ್ಟಿ ನಾಗೇಂದ್ರ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕುಡಿದು 2 ಸಾವಿರ ಹಣ ಪಡೆದು ಈ ರೀತಿ ಗಲಾಟೆ ಮಾಡಿದೆ ಎಂಬ ವಿಡಿಯೋ ಬಿಡುಗಡೆಯಾಗಿತ್ತು.
ಎರಡು ದಿನಗಳ ನಂತರ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಚಾರಿ, ನಾಲ್ವರು ನಾಗೇಂದ್ರ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದರು. ಹೀಗಾಗಿ ಈ ರೀತಿ ಹೇಳಿಕೆ ನೀಡಿದೆ. ನನಗೆ ಕುಡಿಯುವ ಅಭ್ಯಾಸವೇ ಇಲ್ಲ. ನನಗೆ ನಾಗೇಂದ್ರ ಬೆಂಬಲಿಗರು ಹೆದರಿಸಿ ಕೊಲೆ ಬೆದರಿಕೆ ಹಾಕಿ ವಿಡಿಯೋ ಮಾಡಿಕೊಂಡರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಬಿಜೆಪಿ ಕಾರ್ಯಕರ್ತ ರಾಜಚಾರಿ ತಿಳಿಸಿದ್ದಾರೆ.ಮೈಸೂರು ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಫೈಟ್ ಜೋರಾಗಿದ್ದು, ಬಿಜೆಪಿ ನಗರಾಧ್ಯಕ್ಷ, ಮಾಜಿ ಶಾಸಕ ಎಲ್.ನಾಗೇಂದ್ರ ವರ್ಸಸ್ ಮಾಜಿ ಸಂಸದ ಪ್ರತಾಪ್ ಸಿಂಹ ನಡುವೆ ಪೈಪೋಟಿ ಏರ್ಪಟ್ಟಿದೆ.
