Homeರಾಜ್ಯಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಹಣ, ಮೊಬೈಲ್‌, ಸಿಮ್‌ ಪತ್ತೆ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಹಣ, ಮೊಬೈಲ್‌, ಸಿಮ್‌ ಪತ್ತೆ

ಬೆಂಗಳೂರು,ಅ.1-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಹಣ, ಮೊಬೈಲ್‌, ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ.ಈ ಬಗ್ಗೆ ಜೈಲು ಅಧಿಕಾರಿ ಕೊಟ್ರೇಶ್‌ ಅವರು ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ಆರೋಪದ ಹಿನ್ನಲೆಯಲ್ಲಿ ನಿನ್ನೆ ಕೊಟ್ರೇಶ್‌ ಅವರು ಕಾರಾಗೃಹದ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸಿದಾಗ ಸಿ ಬ್ಯಾರಕ್‌ನಲ್ಲಿ ಒಂದು ಮೊಬೈಲ್‌, ಮೂರು ಸಿಮ್‌ಕಾರ್ಡ್‌ಗಳು ಪತ್ತೆಯಾಗಿವೆ.

ಮೊನ್ನೆ ಅಡಿಗೆ ಮನೆ ಸಮೀಪವಿರುವ ಶೌಚಾಲಯವೊಂದರ ಬಳಿ 8,400 ರೂ. ಹಣ ಪತ್ತೆಯಾಗಿದೆ.ಈ ಹಿನ್ನಲೆಯಲ್ಲಿ ಕೊಟ್ರೇಶ್‌ ಅವರು ನೀಡಿದ ದೂರಿನನ್ವಯ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳಿಗೆ ಬ್ರೇಕ್‌ ಹಾಕುವುದು ಸವಾಲಾಗಿದೆ.

ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಹೇಗೆ ಒಳಗೆ ಹೋದವು ಎಂಬುವುದು ಪೊಲೀಸರಿಗೆ ಪತ್ತೆಹಚ್ಚುವುದು ಕಷ್ಟಸಾಧ್ಯವಾಗಿದೆ.ಈ ಹಿಂದೆಯೂ ಕಾರಾಗೃಹದ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಮೂರು ಪ್ರಕರಣಗಳಲ್ಲಿ ಆರು ಮೊಬೈಲ್‌ಗಳು ಸಿಕ್ಕಿದ್ದವು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಜೈಲು ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದರು.ಇದೀಗ ಮತ್ತೆ ಜೈಲಿನೊಳಗೆ ಹಣ, ಮೊಬೈಲ್‌, ಸಿಮ್‌ಕಾರ್ಡ್‌ಗಳು ಪತ್ತೆಯಾಗಿರುವುದು ಕಾರಾಗೃಹ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.

RELATED ARTICLES
spot_img

Latest News