Homeರಾಜ್ಯಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಶಾಲಾ ವಾಹನಗಳ ಶುಲ್ಕ ಹೆಚ್ಚಳ

ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಶಾಲಾ ವಾಹನಗಳ ಶುಲ್ಕ ಹೆಚ್ಚಳ

School bus fares hiked after petrol-diesel price hike

ಬೆಂಗಳೂರು, ಮೇ 17- ರಾಜ್ಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ನಿರಂತರವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಖಾಸಗಿ ಬಸ್‌‍ಗಳ ಟಿಕೆಟ್‌ ದರ ಏರಿಕೆಯಾದ ಬೆನ್ನಲ್ಲೇ, ಈಗ ಶಾಲಾ ವಾಹನಗಳ ಮಾಸಿಕ ಶುಲ್ಕವನ್ನೂ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಇದರಿಂದಾಗಿ ಈಗಾಗಲೇ ಹಣದುಬ್ಬರದಿಂದ ಬಳಲುತ್ತಿರುವ ಪೋಷಕರಿಗೆ ಮತ್ತೊಂದು ಹೊರೆಯಾಗಿದೆ. ರಾಜ್ಯದ ಖಾಸಗಿ ಶಾಲಾ ವಾಹನಗಳ ಸಂಘವು ಶಾಲಾ ಬಸ್‌‍ ಹಾಗೂ ವ್ಯಾನ್‌ಗಳ ಮಾಸಿಕ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ.

ಖಾಸಗಿ ಬಸ್‌‍ ದರ ಏರಿಕೆ :
ಡೀಸೆಲ್‌ ಬೆಲೆ ಏರಿಕೆಯ ಹಿನ್ನೆಲೆ ಕರ್ನಾಟಕದ ಖಾಸಗಿ ಬಸ್‌‍ ಸಂಚಾಲಕರು ಮೇ 20ರಿಂದ ಪ್ರಯಾಣ ದರವನ್ನು 10 ರಿಂದ 20 ಶೇಕಡಾ ಹೆಚ್ಚಿಸಲು ಸಿದ್ಧರಾಗಿದ್ದಾರೆ. ಕೆಲ ಸಂಚಾಲಕರು ಈಗಾಗಲೇ ಪರಿಸ್ಕೃತ ದರಗಳನ್ನು ಜಾರಿಗೊಳಿಸಿದ್ದಾರೆ. ಉದಾಹರಣೆಗೆ, ಜನಪ್ರಿಯ ಬುಕ್ಕಿಂಗ್‌ ವೆಬ್‌ಸೈಟ್‌ನಲ್ಲಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ 899 ರೂಪಾಯಿ ದರವು 1,100 ರೂಪಾಯಿಯಿಂದ 1,200 ರೂಪಾಯಿಗೆ ಏರಿಕೆಯಾಗಿದೆ. ಆದರೆ, ಈ ದರ ಏರಿಕೆ ಈ ವಾರದ ಕೊನೆಯೊಳಗೆ ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ಬರಲಿದೆ.

ಕರ್ನಾಟಕ ರಾಜ್ಯ ಖಾಸಗಿ ಬಸ್‌‍ ಸಂಘಗಳ ಒಕ್ಕೂಟ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಹಳೆಯ ದರ ವ್ಯವಸ್ಥೆಯಲ್ಲಿ ಬಸ್‌‍ ನಿರ್ವಹಣೆ ಮತ್ತು ಕಾರ್ಯಾಚರಣೆ ಈಗ ಆರ್ಥಿಕವಾಗಿ ಸಾಧ್ಯವಿಲ್ಲ ಎಂದು ತಿಳಿಸಿದೆ.

ಮುಂದಿನ ದಿನಗಳ ಮಾರುಕಟ್ಟೆ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗುತ್ತಿದೆ. 300ರಿಂದ 400 ಕಿಮೀ ಪ್ರಯಾಣಗಳಿಗೆ 150 ರಿಂದ 200 ರೂಪಾಯಿ ಹೆಚ್ಚಿಸಲು ನಾವು ತೀರ್ಮಾನಿಸಿದ್ದೇವೆ. ಮುಂದಿನ ವಾರವೂ ಡೀಸೆಲ್‌ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಹೆಚ್ಚು ಇದೆ. ಆದ್ದರಿಂದ ಟಿಕೆಟ್‌ ದರಗಳನ್ನು ಅದಕ್ಕೆ ಅನುಗುಣವಾಗಿ ಹೊಂದಿಸಬೇಕಾಗಿದೆ ಕರ್ನಾಟಕ ರಾಜ್ಯ ಬಸ್‌‍ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಟಿ.ಜಿ.ಚಂದ್ರಶೇಖರ್‌ ಹೇಳಿದ್ದಾರೆ.

ದರ ಏರಿಕೆ ಕೇವಲ ಡೀಸೆಲ್‌ ಬೆಲೆ ಏರಿಕೆಯಿಂದಲ್ಲ. ಇತ್ತೀಚಿನ 5 ಶೇಕಡಾ ಟೋಲ್‌ ಶುಲ್ಕ ಏರಿಕೆ ನಮ ಲಾಭಾಂಶಕ್ಕೆ ಹೊಡೆತ ನೀಡುತ್ತಿದೆ. ಜೊತೆಗೆ 1 ಲಕ್ಷ ರೂಪಾಯಿಗಳಿಂದ1.9 ಲಕ್ಷ ರೂಪಾಯಿಗಳವರೆಗೆ ತ್ರೈಮಾಸಿಕ ರಸ್ತೆ ತೆರಿಗೆ ಪಾವತಿಸುತ್ತಿದ್ದೇವೆ. ಆದರೂ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸಡಿಲಿಕೆ ಅಥವಾ ಅನುದಾನ ಸಿಕ್ಕಿಲ್ಲ. ಖಾಸಗಿ ಸಾರಿಗೆ ಕ್ಷೇತ್ರವು ಹೆಚ್ಚುತ್ತಿರುವ ವೆಚ್ಚ ಮತ್ತು ಸ್ಪರ್ಧಾತಕ ಒತ್ತಡಗಳಿಂದ ನಿಧಾನವಾಗಿ ನಶಿಸಿ ಹೋಗುವ ಸ್ಥಿತಿಯಲ್ಲಿದೆ ಎಂದು ಶರ್ಮ ವಿವರಿಸಿದರು.

ಪ್ರತಿ ದೂರ ಪ್ರಯಾಣದ ಬಸ್‌‍ಗೆ ಒಂದೇ ಟ್ರಿಪ್‌ಗೆ ಸುಮಾರು 150 ಲೀಟರ್‌ ಡೀಸೆಲ್‌ ಅಗತ್ಯವಿರುತ್ತದೆ. ಡೀಸೆಲ್‌ ದರದಲ್ಲಿ 3 ರೂಪಾಯಿ ಏರಿಕೆಯಿಂದ ಪ್ರತಿ ಟ್ರಿಪ್‌ಗೆ ಹೆಚ್ಚುವರಿ 450 ರೂಪಾಯಿಗಳಿಂದ 1 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ. ಶಕ್ತಿ ಯೋಜನೆಯ ಪರಿಣಾಮವಾಗಿ ಮಧ್ಯಮ ಮಟ್ಟದ ಸಂಚಾಲಕರೇ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಈ ದರ ಏರಿಕೆ ಪ್ರಯಾಣಿಕರ ಮೇಲೂ ಭಾರೀ ಪರಿಣಾಮ ಬೀರುತ್ತದೆ.

ಶಾಲಾ ವಾಹನ ಶುಲ್ಕ ಏರಿಕೆ :
ರಾಜ್ಯಾದ್ಯಂತ ಮುಂದಿನ ವಾರದಿಂದ ಶಾಲೆಗಳು ಪುನರಾರಂಭಗೊಳ್ಳಲಿರುವ ಹೊತ್ತಿನಲ್ಲಿ ಈ ನಿರ್ಧಾರ ಹೊರಬಿದ್ದಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಈಗಾಗಲೇ ಶಿಕ್ಷಣ ಶುಲ್ಕ, ಪುಸ್ತಕ, ಯೂನಿಫಾರ್ಮ್‌ ಹಾಗೂ ಇತರೆ ಖರ್ಚುಗಳಿಂದ ಸಂಕಷ್ಟದಲ್ಲಿರುವ ಪೋಷಕರಿಗೆ ಶಾಲಾ ವಾಹನ ಶುಲ್ಕ ಏರಿಕೆ ಮತ್ತೊಂದು ದೊಡ್ಡ ಹೊರೆ ಆಗಿದೆ.

ಇಂಧನ ದರ ಏರಿಕೆಯಿಂದ ಖಾಸಗಿ ಸಾರಿಗೆ ಕ್ಷೇತ್ರ ತತ್ತರಿಸಿದ್ದು, ಖಾಸಗಿ ಬಸ್‌‍ ಮಾಲೀಕರು ಕೂಡ ಟಿಕೆಟ್‌ ದರವನ್ನು ಶೇ.20ರಿಂದ 30ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ. ನಗರ ಹಾಗೂ ನಗರಾಂತರ ಮಾರ್ಗಗಳಲ್ಲಿ ಸಂಚರಿಸುವ ಅನೇಕ ಖಾಸಗಿ ಬಸ್‌‍ಗಳಲ್ಲಿ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ. ಡೀಸೆಲ್‌ ಬೆಲೆ ಹೆಚ್ಚಳ, ವಾಹನ ಬಿಡಿಭಾಗಗಳ ದುಬಾರಿ, ನಿರ್ವಹಣಾ ವೆಚ್ಚ ಹಾಗೂ ಚಾಲಕ-ನಿರ್ವಾಹಕರ ವೇತನ ಹೆಚ್ಚಳದಿಂದ ಹಳೆಯ ದರದಲ್ಲಿ ಸೇವೆ ಮುಂದುವರಿಸುವುದು ಅಸಾಧ್ಯವಾಗಿದೆ ಎಂದು ಬಸ್‌‍ ಮಾಲೀಕರು ತಿಳಿಸಿದ್ದಾರೆ.

ಇದೀಗ ಇದೇ ಸಮಸ್ಯೆ ಶಾಲಾ ವಾಹನಗಳ ಮೇಲೂ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಶಾಲಾ ವಾಹನಗಳು ಮಕ್ಕಳ ಸಾರಿಗೆ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಬಹುತೇಕ ಖಾಸಗಿ ವಾಹನಗಳಾಗಿವೆ. ಪ್ರತಿದಿನ ಇಂಧನ ವೆಚ್ಚ ಹೆಚ್ಚುತ್ತಿರುವುದರಿಂದ ವಾಹನ ನಿರ್ವಹಣೆ ಕಷ್ಟಕರವಾಗಿದೆ ಎಂದು ವಾಹನ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಶಾಲಾ ವಾಹನಗಳ ಸಂಘದ ಅಧ್ಯಕ್ಷ ರವಿಕುಮಾರ್‌ ಮಾತನಾಡಿ, ಇಂಧನ ದರ ಏರಿಕೆಯಿಂದಾಗಿ ಶಾಲಾ ವಾಹನಗಳ ಮಾಸಿಕ ಶುಲ್ಕ ಹೆಚ್ಚಳ ಮಾಡುವುದು ನಮಗೆ ಅನಿವಾರ್ಯವಾಗಿದೆ. ಪೋಷಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಆದರೆ ಡೀಸೆಲ್‌ ವೆಚ್ಚ, ವಾಹನ ನಿರ್ವಹಣೆ, ವಿಮೆ, ತೆರಿಗೆ ಹಾಗೂ ಸಿಬ್ಬಂದಿ ವೇತನಗಳನ್ನು ಲೆಕ್ಕ ಹಾಕಿದಾಗ ಕನಿಷ್ಠ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Latest News