ಬೆಂಗಳೂರು, ಮೇ 17- ಸಮುದ್ರ ಭಾಗದಲ್ಲಿ ವೈಪರೀತ್ಯಗಳು ಮುಂದು ವರಿದಿದ್ದು, ಮುಂಗಾರು ಮಳೆ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ ರಾಜ್ಯದ ವಿವಿಧ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದು, ಮುಂದಿನ 7 ದಿನ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದುವರಿಯಲಿದೆ.
ಇದರ ಬೆನ್ನಲ್ಲೆ ಮುಂಗಾರು ಮಳೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಭೀಕರ ಬಿರುಗಾಳಿ ಬೀಸಲಿದೆ. ಇದರೊಂದಿಗೆ ಪ್ರಾಣಾಂತಿಕ ಗುಡುಗು ಮತ್ತು ಮಿಂಚು ಸಹಿತ ಆರ್ಭಟ ಇರಲಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಮೇ 26ರ ಹೊತ್ತಿಗೆ ಮುಂಗಾರು ಮಳೆಯ ಮಾರುತಗಳು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಅವಧಿಗು ಮುನ್ನವೇ ಅಂದರೆ ಇನ್ನು ಹತ್ತೇ ದಿನಗಳಲ್ಲಿ (ಮೇ ಕೊನೆ ವಾರ) ಮುಂಗಾರಿನ ಅಧಿಕೃತ ಪ್ರವೇಶವಾಗಲಿದೆ ಎನ್ನಲಾಗಿದೆ. ಹೇಗೆಂದರೆ 3-4 ದಿನಗಳಲ್ಲಿ ಆಗ್ನೆಯ ಅರೇಬಿಯನ್ ಸಮುದ್ರ, ನೈಋತ್ಯ ಮತ್ತು ಆಗ್ನೆಯ ಬಂಗಾಳಕೊಲ್ಲಿಯ ಕೆಲವು ಭಾಗಗಳು ಮಾತ್ರವಲ್ಲದೇ ಅಂಡಮಾನ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಭಾಗಗಳಲ್ಲಿ ಮುಂಗಾರು ಆಗಮಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಿವಿಧ ಭಾಗಗಳಲ್ಲಿ ಅನುಕೂಲಕರ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಮೇ 16ರಂದು ಕಂಡು ಬಂದಿದ್ದ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 4.5 ಕಿ.ಮೀವರೆಗೆ ವಿಸ್ತರಿಸಿದೆ. ಇದು ಇನ್ನಷ್ಟು ತೀವ್ರಗೊಳ್ಳಲೂಬಹುದು. ಇದು ಉತ್ತರ ಕರಾವಳಿ ತಮಿಳುನಾಡು ಮತ್ತಿತರ ಪ್ರದೇಶಗಳಲ್ಲಿ ಮೇಲೆ ಪ್ರಭಾವ ಬೀರುತ್ತದೆ. ವಿದರ್ಭ ಪ್ರದೇಶದಲ್ಲೂ ವಾಯು ಚಂಡಮಾರುತದ ಪರಿಚಲನೆಯು (1.5 ಕಿಮೀ) ಮುಂದುವರೆದಿದೆ.
ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದೆ. ಬಾಳೆಹೊನ್ನೂರು, ಮಂಗಳೂರು, ಆಗುಂಬೆ, ಮೂಡಿಗೆರೆ, ಕೊಪ್ಪಳದಲ್ಲಿ ಸಾಧಾರಣ ಮಳೆ ಆಗಿದೆ. ಉತ್ತರ ಕರ್ನಾಟಕದ ಒಂದಷ್ಟು ಕಡೆಗಳಲ್ಲಿ ಹಗುರ ಮಳೆ ಆಗಿದ್ದರೆ, ಬೆಂಗಳೂರಿನಲ್ಲಿ ನೆನ್ನೆ ಇಡೀ ದಿನ ಮಬ್ಬು ಕವಿದಿತ್ತು. ಮುಂದಿನ 7 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.
ಕರ್ನಾಟಕಕ್ಕೆ 3 ದಿನ ಭಾರೀ ಮಳೆ- ಯೆಲ್ಲೋ ಅಲರ್ಟ್ :
ಇಂದಿನಿಂದ 3-5 ದಿನ ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ರಾಮನಗರ, ಶಿವಮೊಗ್ಗ,, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದು ದಿನ ಭಾರೀ ಮಳೆ ಆಗಲಿದ್ದು, ಪ್ರತ್ಯೇಕ ದಿನಗಳಲ್ಲಿ ಆಯಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ಈ ಭಾಗದಲ್ಲಿ ಶನಿವಾರದವರೆಗೂ ಅಧಿಕ ಬಿಸಿಲು, ಒಣಹವೆ ಕಂಡು ಬಂದಿದ್ದು, ಇದೀಗ ಮಳೆಯ ವಾತಾವರಣ ಕಂಡು ಬರುತ್ತದೆ.
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಹಾಗೂ ಕೊಪ್ಪಳ, ರಾಯಚೂರು, ಯಾದಗಿರಿ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ ಭಾಗದಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹಗುರ ಮಳೆ ಸಾಧ್ಯತೆ ಇದೆ. ಇನ್ನೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಬರೋಬ್ಬರಿ ಕನಿಷ್ಠ 3.1 ಹಾಗೂ ಗರಿಷ್ಠ 5 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಂಡು ಬರಲಿದೆ. ಮೇ 20ರಿಂದ ಮತ್ತೆ ಬಿಸಿಲು ಹೆಚ್ಚಾಗಲೂಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.
ಇತ್ತ ಮಲೆನಾಡಿನ ಭಾಗದಲ್ಲಂತೂ ಈಗಾಗಲೇ ಮಳೆರಾಯ ಅಟ್ಟಹಾಸ ಶುರು ಮಾಡಿದ್ದಾನೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್ ಮತ್ತು ಚಾರ್ಮಾಡಿ ಘಾಟಿಯಲ್ಲಿ ಮಧ್ಯಾಹ್ನದ ನಂತರ ಭೀಕರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಚಾರ ದುಸ್ತರವಾಗಿದೆ.
ರಾಜ್ಯದ ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 18ರ ತನಕ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ. ಮೇ 19ರಿಂದ ಮಳೆ ಕಡಿಮೆಯಾಗಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ರಾಜ್ಯದ ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಮಾತ್ರ ಇರಬಹುದು.
