ದೊಡ್ಡಬಳ್ಳಾಪುರ,ಜೂ.16- ಮಗಳ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಾವ-ಅಳಿಯನ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಮಾವ ಸಾವನ್ನಪ್ಪಿರುವ ಘಟನೆ ತಾಲೂಕಿನ ನೇರಳಘಟ್ಟ ಕಾಲೋನಿಯಲ್ಲಿ ನಡೆದಿದೆ.
ಮೃತರನ್ನು ನರಸಪ್ಪ (61) ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಅಳಿಯ ಲಕ್ಷಣ (45)ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನರಸಪ್ಪ ಅವರ ಮೊದಲ ಪುತ್ರಿಯನ್ನು ಲಕ್ಷಣ ವಿವಾಹವಾಗಿದ್ದು, ಕುಟುಂಬ ಸಮೇತ ಮಾವನ ಮನೆಯಲ್ಲಿಯೇ ವಾಸವಾಗಿದ್ದರು. ಈ ವಿಚಾರದಿಂದ ಅಸಮಾಧಾನಗೊಂಡಿದ್ದ ನರಸಪ್ಪ, ಮದ್ಯದ ಅಮಲಿನಲ್ಲಿ ಆಗಾಗ ಮನೆ ಬಿಟ್ಟು ತೆರಳುವಂತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಮೊನ್ನೆ ಇದೇ ವಿಚಾರವಾಗಿ ಮನೆಯಲ್ಲಿ ಕುಟುಂಬದ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಸಂದರ್ಭದಲ್ಲಿ ನರಸಪ್ಪ ತಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಹೊರಗೆ ಹೋಗಿದ್ದ ಅಳಿಯ ಲಕ್ಷಣ ವಿಷಯ ತಿಳಿದು ಮನೆ ಬಳಿ ಬಂದು ಕೋಪಗೊಂಡು ಮಾವನೊಂದಿಗೆ ಗಲಾಟೆ ನಡೆಸಿದ್ದಾನೆ. ಈ ವೇಳೆ ತಳ್ಳಾಟದಲ್ಲಿ ನರಸಪ್ಪ ಚರಂಡಿಗೆ ಬಿದ್ದಿದ್ದಾರೆ.
ಕೆಳಗೆ ಬಿದ್ದಿದ್ದ ಅವರ ಕಾಲಿನ ಮೇಲೆ ಕಲ್ಲು ಎತ್ತಿಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಪರಿಣಾಮ ನರಸಪ್ಪ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮೊದಲು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಡಾ. ಎಂ.ಬಿ. ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
