ಬೆಂಗಳೂರು/ಮಂಡ್ಯ,ಜು.31- ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಎಲ್ಲಾ ಅಸಂಘಟಿತ ಕಾರ್ಮಿಕರ ಜೊತೆಗೂಡಿ ಆ.13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ರಾಜ್ಯಸರ್ಕಾರ ಹಾಗೂ ವಿಪಕ್ಷಗಳ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಕನ್ನಡಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಎಲ್ಲಾ ನಾಟಕಗಳನ್ನು ನಿಲ್ಲಿಸಿ ಕೂಡಲೇ ತುರ್ತು ಸದನ ಕರೆದು ಒಗ್ಗಟ್ಟು ಪ್ರದರ್ಶಿಸಿ ಎಂದು ಒತ್ತಾಯಿಸಿದ್ದಾರೆ. ಯಾರು, ಏನೇ ಹೇಳಿದರೂ ಅದಕ್ಕೆ ಕಿವಿಗೊಡಬೇಡಿ.
ರಾಜ್ಯದ ಜನರ ಹಾಗೂ ರೈತರ ಹಿತ ಕಾಯುವ ಜವಾಬ್ದಾರಿ ಹೊತ್ತಿರುವ ರಾಜ್ಯಸರ್ಕಾರ ಹಾಗೂ ವಿಪಕ್ಷ ಶಾಸಕರು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯವಾಗಿದ್ದು, ನೀವು ರಾಜ್ಯದ ಜನರಿಗೆ ನಿಮ ಟೀಕೆ, ಟಿಪ್ಪಣಿ ಮಾತುಗಳು ಬೇಕಾಗಿಲ್ಲ. ಜೀವಜಲದ ಬಗ್ಗೆ ನೀವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸಬೇಡಿ ಎಂದು ಕಿಡಿಕಾರಿದ್ದಾರೆ.
ಕೇವಲ ನೀವು ಸರ್ವಪಕ್ಷ ಸಭೆ, ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿ ನೀವು ಹೋರಾಟ ಮಾಡಿ, ನಾಟಕ ಮಾಡಬೇಡಿ, ನಿಮ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಮಳೆ ಕೊರತೆಯಿಂದ ಬರ, ಬೆಳೆಹಾನಿ ಸೇರಿದಂತೆ ಅನೇಕ ಸಮಸ್ಯೆಗಳು ರಾಜ್ಯದಲ್ಲಿ ತಾಂಡವವಾಡುತ್ತಿರುವಾಗ ಯಾವುದೇ ಕಾರಣಕ್ಕೂ ನೀವು ನೀರು ಬಿಡಬೇಡಿ.
ಈ ಹಿಂದೆ 1967 ರಲ್ಲಿ ಕರುಣಾನಿಧಿಯವರು ನಿಜಲಿಂಗಪ್ಪ ಅವರ ಜೊತೆ ಮಾತುಕತೆ ಮಾಡಿದರು. ಪ್ರೀತಿ, ಅಭಿಮಾನದಿಂದ ತೀರ್ಮಾನ ಮಾಡಿ ಎರಡೂ ರಾಜ್ಯದ ರೈತರ ಮನವೊಲಿಸಲಾಗಿತ್ತು. ಆದರೆ ಇಂದು ಎಲ್ಲೋ ಕೂತುಕೊಂಡು 3,500 ಕ್ಯೂಸೆಕ್‌್ಸ ನೀರು ಬಿಡಿ ಎಂದು ಹೇಳುತ್ತಾರೆ. ಇಷ್ಟು ಪ್ರಮಾಣದ ನೀರು ಕೆಆರ್‌ಎಸ್ ಮೈದಾನವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ಬೆಂಗಳೂರಿಗೆ ಬರುವುದರಿಂದ ಏನು ಪ್ರಯೋಜನ? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಅವರೇ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದ ಹಿತ ಕಾಯಬೇಕು ಎಂದು ಒತ್ತಾಯಿಸಿದರು.ರಾಜ್ಯದ ಜನತೆಯ ಪರವಾಗಿ ಆ.13 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಾಜ್ಯಾದ್ಯಂತ ಬಂದ್ ನಡೆಯಲಿದೆ. ಪುರಭವನದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಜಾಥಾ ನಡೆಸಲಾಗುವುದು ಎಂದರು.
ಎಲ್ಲಾ ನಾಗರಿಕರಿಗೆ ಕೈ ಮುಗಿದು ಬೇಡುತ್ತಿದ್ದೇನೆ. ಹೋಟೆಲ್ ಸಂಘದವರು, ಚಾಲಕ ಸಂಘದವರು, ಅಸಂಘಟಿತ ಕಾರ್ಮಿಕ ಸಂಘಟನೆಗಳು, ಚಿತ್ರರಂಗ ಸೇರಿದಂತೆ ಎಲ್ಲಾ ವಲಯದವರೂ ಸ್ಪಂದಿಸಬೇಕು. ನೈತಿಕ ಬೆಂಬಲ ಎಂಬುದನ್ನು ಬಿಟ್ಟು ಸಕ್ರಿಯವಾಗಿ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಯಾವುದೇ ಒತ್ತಡಕ್ಕೆ ಮಣಿದು ನೀರು ಬಿಟ್ಟರೆ ಹಿಂದೆಂದೂ ಕಾಣದ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ. ಈಗಾಗಲೇ ಮಂಡ್ಯ ಸೇರಿದಂತೆ ವಿವಿಧೆಡೆ ಹೋರಾಟ ನಡೆಯುತ್ತಿದೆ. ಇದು ಇನ್ನಷ್ಟು ಹೆಚ್ಚಿ ಪರಿಸ್ಥಿತಿ ಕೈ ಮೀರಲು ಸರ್ಕಾರ ಬಿಡಬಾರದು ಎಂದು ಮನವಿ ಮಾಡಿದರು.
ನಿರಂತರವಾಗಿ ಕಾವೇರಿ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಲಾಗುವುದು ಎಂದು ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕೆ.ಆರ್.ಕುಮಾರ್, ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಬಿಜೆಪಿ ಪ್ರತಿಭಟನೆ :
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ರೈತರ ಹಿತವನ್ನು ಬಲಿ ಕೊಡಬಾರದು ಎಂದು ಆಗ್ರಹಿಸಿ ಇಂದು ಬೆಳಿಗ್ಗೆ ಪ್ರತಿಪಕ್ಷ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೆಆರ್‌ಎಸ್‌ಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.ಅಲ್ಲದೆ ವಿವಿಧ ಕನ್ನಡಪರ ಸಂಘಟನೆಗಳು ತಮಿಳುನಾಡಿಗೆ ನೀರು ಬಿಡುವ ತೀರ್ಮಾನದಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಖಾಲಿ ಕೊಡಗಳ ಪ್ರದರ್ಶನ ನಡೆಸಿದರು.
ಕೆಆರ್‌ಎಸ್ ಜಲಾಶಯದಲ್ಲಿ ಸಾಂಕೇತಿಕವಾಗಿ ಹುಲ್ಲು ತಿನ್ನುವ ಮೂಲಕ ಅಸಹಾಯಕ ಪರಿಸ್ಥಿತಿಯನ್ನು ಪ್ರದರ್ಶಿಸಿದರು.ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ವಿವಿಧ ರೈತಪರ ಸಂಘಟನೆಗಳು, ಸ್ಥಳೀಯ ನಾಗರಿಕ ಸಂಘಟನೆಗಳ ಕಾರ್ಯಕರ್ತರು ಕೆಆರ್‌ಎಸ್ ದ್ವಾರದ ಬಳಿ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸಿಡಬ್ಲ್ಯೂಎಂಎ ತೀರ್ಪಿನ ವಿರುದ್ಧವೂ ಕೂಡಾ ಘೋಷಣೆಗಳನ್ನು ಮೊಳಗಿಸಿದರು. ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲು ಆದೇಶಿಸಿರುವ ಕ್ರಮ ಖಂಡನೀಯ ಎಂದರು.
