ಬೆಂಗಳೂರು, ಸೆ.15-ಗೌರಿ-ಗಣೇಶ ಹಬ್ಬದ ನಂತರವೂ ಚಿನ್ನ ಬೆಳ್ಳಿ ದರಗಳಲ್ಲಿ ಕುಸಿತ ಮುಂದುವರೆದಿದೆ. ಹಬ್ಬಕ್ಕೂ ಮುನ್ನ ಅಲ್ಪ ಚೇತರಿಕೆ ಕಂಡಿದ್ದ ಚಿನ್ನ ಮತ್ತೆ ಮೂರು ದಿನಗಳಿಂದ ಕುಸಿತದ ಹಾದಿ ಹಿಡಿದಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಬೆಳ್ಳಿ ದರದಲ್ಲಿ ಸ್ಥಿರತೆ ಕಂಡುಬಂದಿದೆ.
ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಪದೇ ಪದೇ ಏರಿಳಿತವಾಗುತ್ತಿದ್ದರೂ ದುಬಾರಿ ದರವೇ ಇದೆ. ಒಂದು ವರ್ಷದಲ್ಲಿ ಒಂದು ಗ್ರಾಂ ಚಿನ್ನದ ದರದಲ್ಲಿ ಸುಮಾರು 5 ಸಾವಿರ ರೂ. ಏರಿಕೆಯಾಗಿದೆ. ಬೆಳ್ಳಿ ಒಂದು ಕೆ.ಜಿ.ಗೆ ಒಂದು ಲಕ್ಷ ರೂ.ಗೂ ಅಧಿಕ ದರವಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 92 ರೂ. ಇಳಿಕೆಯಾಗಿದ್ದು, 15,317 ರೂ. ನಷ್ಟಿತ್ತು. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 85 ರೂ. ನಷ್ಟು ಕಡಿಮೆಯಾಗಿದ್ದು, 14,040 ರೂ.ನಷ್ಟಿದೆ.
ಆಭರಣ ಚಿನ್ನವಾದ 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 69 ರೂ. ಕಡಿಮೆಯಾಗಿದ್ದು, 11,488 ರೂ.ನಷ್ಟಿದೆ. ಸೆ.7 ರಿಂದ ಪದೆಪದೇ ಏರಿಳಿತದಲ್ಲಿ ಸಾಗುತ್ತಿದ್ದ ಚಿನ್ನವು ಸೆ.12ರಂದು ಅಲ್ಪ ಚೇತರಿಕೆಯಾಗಿತ್ತು. ಸೆ.13ರಂದು ಸ್ಥಿರವಾಗಿದ್ದ ಚಿನ್ನವು ನಿನ್ನೆ ಮತ್ತು ಇಂದು ಇಳಿಕೆಯಾಗಿದೆ.
ಸೆ.6ರಿಂದ ಸ್ಥಿರವಾಗಿದ್ದ ಬೆಳ್ಳಿಯು ಸೆ.10ರಂದು ಒಂದು ಕೆ.ಜಿ. ಐದು ಸಾವಿರ ರೂ. ಏರಿಕೆಯಾಗಿತ್ತು. ಮರುದಿನವೇ 10 ಸಾವಿರ ರೂ. ಇಳಿಕೆಯಾಗಿ ಒಂದು ಕೆ.ಜಿ. ಬೆಳ್ಳಿ ದರವು 2.45 ಲಕ್ಷ ರೂ.ಗೆ ಇಳಿದಿತ್ತು. ಅಂದಿನಿಂದ ಯಾವುದೇ ಏರಿಳಿತವಿಲ್ಲದೆ, ಅದೇ ದರ ಮುಂದುವರೆದಿದೆ. ತಾತ್ಕಾಲಿಕವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲಿ ಸಾಗುತ್ತವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
