ಕೋಲ್ಕತ್ತಾ, ಸೆ.15- ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಮಹಾ ತಿರುವು ಸಿಕ್ಕಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯಿಂದ ಹೊರಬಂದು ಎನ್‌ಸಿಪಿಐ ಸೇರಿದ 20 ಬಂಡಾಯ ಸಂಸದರ ಪೈಕಿ 17 ಸಂಸದರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಕೂಚ್ ಬೆಹಾರ್ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಸಂಭಾವ್ಯ ಪಕ್ಷಾಂತರವು ಪಶ್ಚಿಮ ಬಂಗಾಳ ಮತ್ತು ದೆಹಲಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಟ್ಟು 20 ಬಂಡಾಯ ಸಂಸದರಲ್ಲಿ 17 ಸಂಸದರು ಒಟ್ಟಾಗಿ ಬಿಜೆಪಿ ಸೇರುತ್ತಿರುವುದರಿಂದ, ಇದು ಒಟ್ಟು ಬಲದ ಮೂರನೇ ಎರಡರಷ್ಟು ಪ್ರಮಾಣವಾಗುತ್ತದೆ. ಹೀಗಾಗಿ ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಸಂಸದ ಸ್ಥಾನ ಅನರ್ಹತೆಯಾಗುವುದಿಲ್ಲ ಎಂದು ಬಸುನಿಯಾ ಸ್ಪಷ್ಟಪಡಿಸಿದ್ದಾರೆ.
ಮುರ್ಷಿದಾಬಾದ್ ಭಾಗದ ಪ್ರಮುಖ ಸಂಸದರಾದ ಅಬು ತಾಹೆರ್ ಖಾನ್, ಜಂಗಿಪುರ ಸಂಸದ ಖಲೀಲುರ್ ರೆಹಮಾನ್ ಮತ್ತು ಬೆರ್ಹಾಂಪೋರ್ ಸಂಸದ ಯೂಸುಫ್ ಪಠಾಣ್ (ಮಾಜಿ ಕ್ರಿಕೆಟಿಗ) ಬಿಜೆಪಿಗೆ ಸೇರಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇವರ ವಿರೋಧದಿಂದಾಗಿಯೇ ನೇರವಾಗಿ ಬಿಜೆಪಿ ಸೇರದೆ ಮಧ್ಯಂತರವಾಗಿ ಎನ್‌ಸಿಪಿಐಗೆ ಸೇರಲಾಗಿತ್ತು ಎಂದು ಬಸುನಿಯಾ ಬಹಿರಂಗಪಡಿಸಿದ್ದಾರೆ.
ಈ 17 ಸಂಸದರು ಅಧಿಕೃತವಾಗಿ ಬಿಜೆಪಿ ಸೇರಿದರೆ, ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯ ಬಲ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 29ಕ್ಕೆ ಏರಲಿದೆ. ಹಾಗೆಯೇ ಕೇಂದ್ರ ಲೋಕಸಭೆಯಲ್ಲಿ ಬಿಜೆಪಿಯ ಒಟ್ಟು ಸಂಖ್ಯಾಬಲ 252ಕ್ಕೆ ತಲುಪಲಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಯಾರು ಬೇಕಾದರೂ ಬಿಜೆಪಿ ಸೇರಲು ಇಚ್ಛಿಸಬಹುದು, ಆದರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಕೇಂದ್ರ ನಾಯಕತ್ವವೇ ನಿರ್ಧರಿಸುತ್ತದೆ ಎಂದಿದ್ದಾರೆ.
ಬಂಡಾಯವೆದ್ದು ಪ್ರತ್ಯೇಕ ಗುಂಪು ರಚಿಸಿಕೊಂಡ 20 ಸಂಸದರ ವಿರುದ್ಧ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹತೆ ಅರ್ಜಿ ಸಲ್ಲಿಸಿದ್ದು, ಇತ್ತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆಯೂ ವಿಲೀನದ ಅರ್ಜಿ ಬಾಕಿ ಉಳಿದಿದೆ.
ಹೌರಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಇದುವರೆಗೆ ಯಾವುದೇ ಗಣನೀಯ ಸಾಧನೆ ಮಾಡದ ಸಣ್ಣ ಪಕ್ಷವಾಗಿದ್ದು, ತ್ರಿಪುರಾ ಚುನಾವಣೆಯಲ್ಲಿ ಕೆಲವೇ ನೂರು ಮತಗಳನ್ನು ಗಳಿಸಿತ್ತು. ಅನರ್ಹತೆಯಿಂದ ತಾತ್ಕಾಲಿಕವಾಗಿ ರಕ್ಷಣೆ ಪಡೆಯಲು ಸಂಸದರು ಈ ಪಕ್ಷದ ಮೊರೆ ಹೋಗಿದ್ದರು ಎಂಬುದು ಈಗ ಬಹಿರಂಗವಾಗಿದೆ. ದುರ್ಗಾ ಪೂಜೆಯ ಹೊತ್ತಿಗೆ ಈ 17 ಸಂಸದರು ಎನ್‌ಡಿಎ ತೆಕ್ಕೆಗೆ ಜಾರಿದರೆ, ಮುಂಬರುವ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಮತ್ತಷ್ಟು ರಾಜಕೀಯ ಹಿನ್ನಡೆಯಾಗುವ ಸಾಧ್ಯತೆಯಿದೆ.
