ಚಿಕ್ಕಮಗಳೂರು, ಸೆ.15- ಕಾಫಿನಾಡಿನ ಬಯಲು ಭಾಗದಲ್ಲಿ ಚಿರತೆಗಳ ಓಡಾಟ ಮುಂದುವರಿದಿದ್ದು, ಕಡೂರು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಮನೆಯ ಹಿತ್ತಲಿಗೆ ನುಗ್ಗಿದ ಚಿರತೆ ನೀರು ಕುಡಿದು ತೆರಳಿದೆ. ಮನೆಯ ಆವರಣದಲ್ಲಿ ಚಿರತೆ ಓಡಾಡಿ ನೀರು ಕುಡಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಭಾಕರ್ ಎಂಬುವವರ ಮನೆಯ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಯಾವುದೇ ಆತಂಕವಿಲ್ಲದೆ ಆವರಣದಲ್ಲಿ ಸಂಚರಿಸಿದೆ. ಪದೇಪದೇ ಚಿರತೆಗಳ ಓಡಾಟ ಕಂಡುಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ ವೇಳೆ ಮನೆಗಳಿಂದ ಹೊರಬರಲು ಹಾಗೂ ಜಮೀನುಗಳಿಗೆ ತೆರಳಲು ಜನರು ಆತಂಕ ಪಡುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನವಲನದ ಮೇಲೆ ನಿಗಾ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಂಪ್ಹೌಸ್ ಮೇಲೆ ಚಿರತೆ ಪ್ರತ್ಯಕ್ಷ; ರೈತರಲ್ಲಿ ಆತಂಕ
ಕೊಡಿಗೇನಹಳ್ಳಿ, ಸೆ.15- ಹೋಬಳಿಯ ಬೂದೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಮೂರು ದಿನಗಳಿಂದ ಜಮೀನುಗಳ ಬಳಿ ಚಿರತೆ ಓಡಾಡುತ್ತಿರುವುದು ಕಂಡುಬರುತ್ತಿದೆ.
ವಕೀಲ ಆದಿನಾರಾಯಣಪ್ಪ ಅವರ ಜಮೀನಿನ ಪಂಪ್ಹೌಸ್ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ರೈತರೊಬ್ಬರು ಅದರ ದೃಶ್ಯವನ್ನು ಫೋಟೋದಲ್ಲಿ ಸೆರೆಹಿಡಿದಿದ್ದಾರೆ. ಈ ಭಾಗದಲ್ಲಿ ನಿತ್ಯ ನಾಲ್ಕೈದು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಇದೀಗ ಬೂದೇನಹಳ್ಳಿ ಕಡೆಗೂ ಚಿರತೆಗಳ ಸಂಚಾರ ಕಂಡುಬಂದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಚಿರತೆಗಳು ನಾಯಿ, ಕುರಿ ಹಾಗೂ ಮೇಕೆಗಳನ್ನು ಬೇಟೆಯಾಡುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಂಜೆ ವೇಳೆಯಲ್ಲಿ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ನಡೆಸಲು ಹಾಗೂ ಜಾನುವಾರುಗಳನ್ನು ಮೇಯಿಸಲು ರೈತರು ಹಿಂದೇಟು ಹಾಕುವಂತಾಗಿದೆ.
ಈ ಕುರಿತು ವಲಯ ಅರಣ್ಯಾಧಿಕಾರಿ ಎಚ್.ಎಂ. ಸುರೇಶ್ ಮಾತನಾಡಿ, ದೊಡ್ಡಮಾಲೂರು ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಇದೀಗ ಬೂದೇನಹಳ್ಳಿಯಲ್ಲೂ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಬೋನು ಇರಿಸಲಾಗುವುದು ಎಂದು ತಿಳಿಸಿದ್ದಾರೆ.
