Homeಜಿಲ್ಲಾ ಸುದ್ದಿಗಳುಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಸ್ಕೂಟರ್‌ಗೆ ಟ್ಯಾಂಕರ್‌ ಡಿಕ್ಕಿಯಾಗಿ ಮೂವರು ಸಾವು

ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಸ್ಕೂಟರ್‌ಗೆ ಟ್ಯಾಂಕರ್‌ ಡಿಕ್ಕಿಯಾಗಿ ಮೂವರು ಸಾವು

ಮಂಡ್ಯ,ಸೆ.15-ಗೌರಿ-ಗಣೇಶ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಮರುಳುತ್ತಿದ್ದ ವೇಳೆ ಸ್ಕೂಟರ್‌ ಹಾಲಿನ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಒಂದೇ ಗ್ರಾಮದ ಮೂವರು ಮೃತಪಟ್ಟಿರುವ ಘಟನೆ ಮದ್ದೂರು ತಾಲ್ಲೂಕಿನ ಕೊಪ್ಪ ಬಳಿ ಇಂದು ಬೆಳಗ್ಗೆ ನಡೆದಿದೆ. ಕೊಪ್ಪದ ನಿವಾಸಿಗಳಾದ ಕಾವ್ಯ,ಕೀರ್ತನ ಹಾಗೂ ಮುತ್ತುರಾಜ್‌ ಮೃತಪಟ್ಟ ದುರ್ದೈವಿಗಳು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹಬ್ಬದ ನಿಮಿತ್ತ ಸ್ವಗ್ರಾಮಕ್ಕೆ ಬಂದಿದ್ದರು. ಸಂಭ್ರಮದಿಂದ ಹಬ್ಬ ಮುಗಿಸಿಕೊಂಡು ಇಂದು ಬೆಳಗ್ಗೆ ಮೂವರು ಸ್ಕೂಟರ್‌ನಲ್ಲಿ ಬೆಂಗಳೂರಿನತ್ತಾ ತೆರಳುತ್ತಿದ್ದಾಗ ವೇಗವಾಗಿ ಬಂದ ಹಾಲಿನ ಟ್ಯಾಂಕರ್‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಮೂವರು ರಸ್ತೆ ಮೇಲೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗ್ರಾಮದಲ್ಲಿ ಸೂತಕ:ನಿನ್ನೆಯಷ್ಟೆ ಇಡೀ ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಆದರೆ ಇಂದು ಬೆಳ್ಳಂಬೆಳಗ್ಗೆಯೇ ಗ್ರಾಮಸ್ಥರಿಗೆ ಕಹಿ ಸುದ್ದಿ ಬಂದಿದೆ.ಒಂದೇ ಗ್ರಾಮದ ಮೂವರು ಸಾವನ್ನಪ್ಪಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಹಾಗೂ ಕುಟುಂಬ ಸದಸ್ಯರಿಗೆ ಬರಸಿಡಿಲು ಬಡಿದಂತಾಗಿದೆ.ಮಕ್ಕಳನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಘ್ನನಿವಾರಕನ ಪೂಜೆ ಸಲ್ಲಿಸಿ ಕಾಯಕಕ್ಕೆ ತೆರಳುತ್ತಿದ್ದವರಿಗೆ ಬೆಳ್ಳಂಬೆಳಗ್ಗೆ ಟ್ಯಾಂಕರ್‌ ರೂಪದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು, ಬಾಳಿ ಬದುಕಬೇಕಾಗಿದ್ದ ಮೂವರ ಜೀವನವನ್ನು ಕಸಿದುಕೊಂಡಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

RELATED ARTICLES
spot_img

Latest News