ಬೆಂಗಳೂರು,ಸೆ.15-ಬಿ ಖಾತಾ ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸಿಕೊಳ್ಳುವ ವಿಶೇಷ ಯೋಜನೆಯ ಅವಧಿಯನ್ನು 2027ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಅರ್ಹ ಆಸ್ತಿ ಮಾಲೀಕರಿಗೆ ಈ ನಿರ್ಧಾರದಿಂದ ಅನುಕೂಲವಾಗಲಿದೆ.ಬಹುಕಾಲದಿಂದ ಬಿ ಖಾತಾ ಸಮಸ್ಯೆ ಎದುರಿಸುತ್ತಿರುವ ಆಸ್ತಿ ಮಾಲೀಕರಿಗೆ ಇದು ಮಹತ್ವದ ಬೆಳವಣಿಗೆಯಾಗಿದೆ.
ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲೇ ಲಕ್ಷಾಂತರ ಆಸ್ತಿ ಮಾಲೀಕರಿಗೆ ಕಾನೂನುಬದ್ಧ ಹಕ್ಕು, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಆಸ್ತಿ ಮಾರಾಟಕ್ಕೆ ಎದುರಾಗಿದ್ದ ತೊಡಕುಗಳು ನಿವಾರಣೆಯಾಗಲಿವೆ.ಬಿ ಖಾತಾ ಇರುವ ಕಾರಣ ಬ್ಯಾಂಕ್ ಸಾಲ ಪಡೆಯುವುದು, ಆಸ್ತಿ ಮಾರಾಟ ಅಥವಾ ವರ್ಗಾವಣೆ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಕು ಎದುರಾಗುತ್ತಿತ್ತು. ಇದೀಗ ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೆ ಒಳಪಡುವ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಿಕೊಳ್ಳಲು ಹೆಚ್ಚುವರಿ ಕಾಲಾವಕಾಶ ಸಿಕ್ಕಿದೆ.
ಹಿಂದಿನ ಗಡುವಿಗೂ ವಿಸ್ತರಣೆ
ಬಿ ಖಾತಾ ಆಸ್ತಿಗಳನ್ನು ನಿಯಮಬದ್ಧ ಪ್ರಕ್ರಿಯೆ ಮೂಲಕ ಎ ಖಾತಾಗೆ ತರಲು ಸರ್ಕಾರ ರೂಪಿಸಿದ್ದ ವ್ಯವಸ್ಥೆಯಡಿ ಈ ಹಿಂದೆ ನಿಗದಿಪಡಿಸಿದ್ದ ಅವಧಿಯೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಗಡುವು ವಿಸ್ತರಣೆ ಮಹತ್ವದ್ದಾಗಿದೆ. ಅನಧಿಕತ ಅಥವಾ ನಿಯಮ ಉಲ್ಲಂಘನೆಯ ಕಟ್ಟಡಗಳು ಮತ್ತು ನಿವೇಶನಗಳಿಗೆ ಖಾತಾ ನೀಡುವ ವಿಚಾರದಲ್ಲಿ ಸರ್ಕಾರಗಳು ಕಾಲಕಾಲಕ್ಕೆ ನಿಯಮ, ದಂಡ ಹಾಗೂ ಸಕ್ರಮ ಪ್ರಕ್ರಿಯೆಗಳನ್ನು ಜಾರಿಗೊಳಿಸುತ್ತ ಬಂದಿವೆ. ಇತ್ತೀಚಿನ ದಿನಗಳಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಸರ್ಕಾರ ನೀಡಿರುವ ಅವಕಾಶವನ್ನು ಆಸ್ತಿ ಮಾಲೀಕರಿಗೆ ಕಾನೂನುಬದ್ಧ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಾಗಿ ನೋಡಲಾಗುತ್ತಿದೆ.
1,000 ಚದರ ಮೀಟರ್‌ವರೆಗೆ ಮಾತ್ರ
ಸರ್ಕಾರದ ಪ್ರಸ್ತುತ ವ್ಯವಸ್ಥೆಯಡಿ ನಗರ ಸ್ಥಳೀಯ ಸಂಸ್ಥೆ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗರಿಷ್ಠ 1,000 ಚದರ ಮೀಟರ್, ಅಂದರೆ ಸುಮಾರು 10,764 ಚದರ ಅಡಿ ವಿಸ್ತೀರ್ಣದ ಆಸ್ತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೇವಲ ವಿಸ್ತೀರ್ಣದ ಮಿತಿ ಪೂರೈಸಿದರೆ ಸಾಕಾಗುವುದಿಲ್ಲ. ಆಸ್ತಿ ಕಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿರಬೇಕು. ಜತೆಗೆ ಸಂಬಂಧಪಟ್ಟ ಪ್ರದೇಶದ ಮಾಸ್ಟರ್ ಪ್ಲಾನ್, ವಲಯ ನಿಯಮಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳಿಗೆ ಆಸ್ತಿ ಹೊಂದಿಕೆಯಾಗಿರಬೇಕು.
ಕಟ್‌ಆಫ್ ದಿನಾಂಕ
ಅರ್ಹತೆ ನಿರ್ಧರಿಸುವಲ್ಲಿ ಕಟ್‌ಆಫ್ ದಿನಾಂಕ ಪ್ರಮುಖವಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.ನಗರ ಪ್ರದೇಶಗಳಲ್ಲಿ: 2024ರ ಸೆಪ್ಟೆಂಬರ್ 10ರಂದು ಅಥವಾ ಅದಕ್ಕೂ ಮೊದಲು ಬಿ’ ಖಾತಾ ಹೊಂದಿರುವ ಆಸ್ತಿಗಳು ಅರ್ಹತೆಯ ವ್ಯಾಪ್ತಿಗೆ ಬರಲಿವೆ.
ಗ್ರಾಮೀಣ ಪ್ರದೇಶಗಳಲ್ಲಿ:
2025ರ ಏಪ್ರಿಲ್ 7ರಂದು ಅಥವಾ ಅದಕ್ಕೂ ಮೊದಲು ಬಿ’ ಖಾತಾ ದಾಖಲಾಗಿರಬೇಕು.ಖಾತಾ ಇಲ್ಲದ ಆಸ್ತಿಗಳ ವಿಷಯದಲ್ಲಿಯೂ ನಿರ್ದಿಷ್ಟ ಷರತ್ತುಗಳಿದ್ದು, ಸಂಬಂಧಪಟ್ಟ ಕಟ್‌ಆಫ್ ದಿನಾಂಕಕ್ಕೂ ಮುನ್ನ ನೋಂದಾಯಿತ ವಹಿವಾಟು ನಡೆದಿರುವುದು ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
ದಾಖಲೆಗಳ ಡಿಜಿಟಲ್ ಪರಿಶೀಲನೆ :
ಈ ಬಾರಿ ಪ್ರಕ್ರಿಯೆಯಲ್ಲಿ ದಾಖಲೆಗಳ ಪರಿಶೀಲನೆಗೆ ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಆರ್‌ಟಿಸಿ, ಮ್ಯುಟೇಶನ್ ದಾಖಲೆಗಳು, ಎ/ಬಿ ಖರಾಬು ವಿವರಗಳು, ಪಹಣಿ ಹಾಗೂ ಆಸ್ತಿಯ ಮೇಲಿನ ಹಕ್ಕು-ಬಾಧ್ಯತೆ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿರುತ್ತಾರೆ.
ಸರ್ಕಾರ ನಿಗದಿಪಡಿಸಿರುವ ಪರಿವರ್ತನಾ ಶುಲ್ಕ, ದಂಡ ಮತ್ತು ತೆರಿಗೆಗಳನ್ನು ಪಾವತಿಸಿದ ಬಳಿಕ ಅರ್ಹ ಆಸ್ತಿಗಳಿಗೆ ಎ’ ಖಾತಾ ನೀಡುವ ಪ್ರಕ್ರಿಯೆ ನಡೆಯಲಿದೆ.
ಆಸ್ತಿ ಮಾಲೀಕರಿಗೆ ಏನು ಲಾಭ?
ಎ ಖಾತಾ ದೊರೆತ ಬಳಿಕ ಆಸ್ತಿಯ ದಾಖಲೆಗಳ ಸ್ಥಿತಿ ಸುಧಾರಿಸುವುದರ ಜತೆಗೆ ಬ್ಯಾಂಕ್ ಸಾಲ, ಅಡಮಾನ ಸಾಲ, ಆಸ್ತಿ ಮಾರಾಟ ಮತ್ತು ವರ್ಗಾವಣೆಯಂತಹ ವ್ಯವಹಾರಗಳಲ್ಲಿ ಎದುರಾಗುವ ಹಲವು ತೊಡಕುಗಳು ಕಡಿಮೆಯಾಗುವ ನಿರೀಕ್ಷೆಯಿದೆ.
ಆದರೆ ಎ’ ಖಾತಾ ದೊರೆತ ತಕ್ಷಣ ಆಸ್ತಿ ಸಂಪೂರ್ಣವಾಗಿ ಎಲ್ಲ ರೀತಿಯ ಕಾನೂನು ಉಲ್ಲಂಘನೆಗಳಿಂದ ಮುಕ್ತವಾಗಿದೆ ಎಂದರ್ಥವಲ್ಲ. ಭೂಮಿಯ ಮಾಲೀಕತ್ವ, ಭೂಬಳಕೆ, ಕಟ್ಟಡ ನಿಯಮ, ಮಾಸ್ಟರ್ ಪ್ಲಾನ್ ಮತ್ತು ಇತರ ಕಾನೂನುಬದ್ಧ ಅನುಮತಿಗಳು ಪ್ರತ್ಯೇಕವಾಗಿ ಅನ್ವಯಿಸುತ್ತವೆ ಎಂಬುದನ್ನು ಆಸ್ತಿ ಮಾಲೀಕರು ಗಮನಿಸಬೇಕಾಗಿದೆ.
2027ರ ಡಿಸೆಂಬರ್ 31ರವರೆಗೆ ಗಡುವು ವಿಸ್ತರಣೆಯಾಗಿರುವುದು ಅರ್ಹ ಆಸ್ತಿ ಮಾಲೀಕರಿಗೆ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹೆಚ್ಚುವರಿ ಸಮಯ ನೀಡಿದಂತಾಗಿದೆ. ಆದರೆ ಈ ಅವಕಾಶವನ್ನು ಸರ್ಕಾರಿ ಭೂಮಿ, ಕೆರೆ, ರಾಜಕಾಲುವೆ ಅಥವಾ ಸಾರ್ವಜನಿಕ ಜಾಗಗಳನ್ನು ಸಕ್ರಮಗೊಳಿಸುವ ಮಾರ್ಗ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಹೀಗಾಗಿ ಬಿ ಖಾತಾ ಹೊಂದಿರುವವರು ಮೊದಲು ತಮ ಆಸ್ತಿಯ ದಾಖಲೆಗಳು, ಕಟ್‌ಆಫ್ ದಿನಾಂಕ, ಭೂಬಳಕೆ, ವಿಸ್ತೀರ್ಣ ಹಾಗೂ ಮಾಸ್ಟರ್ ಪ್ಲಾನ್‌ಗೆ ಹೊಂದಾಣಿಕೆ ಪರಿಶೀಲಿಸಿ, ಸರ್ಕಾರ ನಿಗದಿಪಡಿಸಿರುವ ಶುಲ್ಕ ಮತ್ತು ಪ್ರಕ್ರಿಯೆಯಂತೆ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ. ,ಬೆಂಗಳೂರಿನಿಂದ ಹಿಡಿದು ರಾಜ್ಯದ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳವರೆಗೆ ಬಿ ಖಾತಾ ಸಮಸ್ಯೆ ಎದುರಿಸುತ್ತಿರುವ ಅರ್ಹ ಆಸ್ತಿ ಮಾಲೀಕರಿಗೆ ಸರ್ಕಾರದ ಗಡುವು ವಿಸ್ತರಣೆ ದಾಖಲೆಗಳನ್ನು ಕ್ರಮಬದ್ಧಗೊಳಿಸಿಕೊಳ್ಳಲು ಮಹತ್ವದ ಅವಕಾಶವಾಗಿದೆ. ಆದರೆ ಅರ್ಹತೆ ಮತ್ತು ಕಾನೂನುಬದ್ಧ ಷರತ್ತುಗಳನ್ನು ಮೀರಿ ಯಾರಿಗೂ ಎ ಖಾತಾ ಸಿಗುವುದಿಲ್ಲ ಎಂಬುದು ಈ ಯೋಜನೆಯ ಪ್ರಮುಖ ಅಂಶವಾಗಿದೆ
ಯಾವ ಆಸ್ತಿಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ?
ಬಿ-ಖರಾಬು ಜಮೀನು
ಅರಣ್ಯ ಅಥವಾ ಗೋಮಾಳ ಭೂಮಿ
ಕೆರೆ ಮತ್ತು ಕೆರೆ ಅಂಗಳದ ಜಾಗಗಳು
ರಾಜಕಾಲುವೆಗಳು, ನಾಲಾಗಳು
ರಸ್ತೆಗಳು ಹಾಗೂ ರಸ್ತೆ ಬದಿಯ ಮೀಸಲು ಜಾಗ
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗಗಳು
ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಆಸ್ತಿಗಳು.
ನ್ಯಾಯಾಲಯ ಅಥವಾ ಟ್ರಿಬ್ಯೂನಲ್‌ಗಳಲ್ಲಿ ವ್ಯಾಜ್ಯದಲ್ಲಿರುವ ಆಸ್ತಿಗಳು.
ಸರ್ಕಾರದ ನಿರ್ಬಂಧಗಳಿರುವ ಹಾಗೂ ಮಾಸ್ಟರ್ ಪ್ಲಾನ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಆಸ್ತಿಗಳಿಗೆ ಅವಕಾಶವಿಲ್ಲ.
