ದೆಹಲಿ, ಜು.31- ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ವರಿಷ್ಠ ನಾಯಕರು ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಎಲ್ಲ ರೀತಿಯ ಚರ್ಚೆಗಳು ಪೂರ್ಣಗೊಂಡಿವೆ. ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮೊಂದಿಗೆ ಕಾಂಗ್ರೆಸ್ ವರಿಷ್ಠ ನಾಯಕರು ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ. ನಾವು ಪರೀಕ್ಷೆ ಬರೆದಿದ್ದೇವೆ, ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಂಚಾಂಗದ ಪ್ರಕಾರ ಭವಿಷ್ಯ ಹಾಗೂ ಶುಭ ಗಳಿಗೆಯನ್ನು ನೋಡಿ ಸಂಪುಟ ವಿಸ್ತರಣೆಗೆ ಮುಹೂರ್ತವನ್ನು ನಿಗದಿಪಡಿಸಲಿದ್ದಾರೆ ಎಂದು ಹೇಳಿದರು.ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ವಿರುದ್ಧ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಹರಿಪ್ರಸಾದ್, ದಾರಿಯಲ್ಲಿ ಹೋಗುವವರೆಲ್ಲಾ ರಾಹುಲ್ ಗಾಂಧಿಯವರನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ. ಮಹಾತ ಗಾಂಧಿ ಜೀ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಸಂತತಿಯ ಜನ ಇವರು ಎಂದರು.
ಬಡವರ ಪರವಾಗಿದ್ದ ಇಂದಿರಾ ಗಾಂಧಿ, ಯುವಕರ ಪರವಾಗಿದ್ದ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಜವಾಹರಲಾಲ್ ನೆಹರು ವಿರುದ್ಧವೂ ಷಡ್ಯಂತ್ರ ನಡೆಸಿದ್ದರು ಎಂದು ಹರಿಪ್ರಸಾದ್ ಕಿಡಿಕಾರಿದರು.
ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಯಶ್‌ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳಿವೆ. ಕೋವಿಡ್ ಸಂದರ್ಭದಲ್ಲಿ 31 ಜನ ಮಹಿಳೆಯರಿಗೆ ತಲಾ 20 ಸಾವಿರ ಸಾಲ ನೀಡುವುದಾಗಿ ಮನೆ ಮನೆಗೆ ಹೋಗಿ ಈ ವ್ಯಕ್ತ ಹೇಳಿದ್ದರು. ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಲಾ 2 ಲಕ್ಷ ಸಾಲ ನೀಡಿರುವುದಾಗಿ ತಿಳಿಸಲಾಗಿದೆ. ಈ ರೀತಿ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 178 ಕೋಟಿ ಹಣಕಾಸು ಅಕ್ರಮ ನಡೆದಿರುವುದು ಆಡಿಟ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ತನಿಖೆಗೆ ಆದೇಶಿಸಿದೆ. ಆದರೆ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಅವರು ಆರೋಪಿಸಿದರು.
ಮಲ್ಪೆ ಬೀಚ್ ನ ಬ್ಯಾಂಕ್ ಶಾಖೆಯಲ್ಲಿ ಸಾಲ ವಸೂಲಾತಿ ಕೆಲಸ ಮಾಡುತ್ತಿದ್ದ ದಲಿತ ನೌಕರ ಸುಬ್ಬಣ್ಣ ಅವರ ಆತಹತ್ಯೆಯಾಗಿದೆ. ಅದು ಆತ್ಮಹತ್ಯೆಯಲ್ಲ, ಕೊಲೆಯಾಗಿರಬಹುದೆಂಬ ಶಂಕೆಯನ್ನು ಠೇವಣಿದಾರರು ವ್ಯಕ್ತಪಡಿಸುತ್ತಿದ್ದಾರೆ ಎಂದರು. ಸುಬ್ಬಣ್ಣ ಅವರ ಸಾವು ಮತ್ತು ಬ್ಯಾಂಕ್ ಹಗರಣದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಮಾತುಗಳನ್ನಾಡುತ್ತಾರೆ. ಆದರೆ ಯಶ ಪಾಲ್ ಸುವರ್ಣ ಸಾಲದ ವಂಚನೆಯ ಪ್ರಕರಣದಲ್ಲಿ ಅಲ್ಪಸಂಖ್ಯಾತರ ಸಹಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಬಿಜೆಪಿಯವರದು ನಕಲಿ ದೇಶಭಕ್ತಿ. ಮುಂದಿನ ದಿನಗಳಲ್ಲಿ ಇಂತಹ ರಾಜಕಾರಣಕ್ಕೆ ಜನರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.
