Saturday, July 27, 2024
Homeರಾಷ್ಟ್ರೀಯಆಂಧ್ರದಲ್ಲಿ ಚುನಾವಣೋತ್ತರ ಹಿಂಸಾಚಾರ : ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಆಯೋಗ ಸಮನ್ಸ್

ಆಂಧ್ರದಲ್ಲಿ ಚುನಾವಣೋತ್ತರ ಹಿಂಸಾಚಾರ : ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಆಯೋಗ ಸಮನ್ಸ್

ನವದೆಹಲಿ,ಮೇ 16- ಆಂಧ್ರಪ್ರದೇಶದಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದೆ. ಈ ಕುರಿತಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಕೇಂದ್ರ ಚುನಾವಣಾ ಆಯೋಗವು ಸಮನ್ಸ್ ಜಾರಿ ಮಾಡಿದೆ. ಈ ಘಟನೆಗಳನ್ನು ನಿಯಂತ್ರಿಸುವಲ್ಲಿ ಆಡಳಿತದ ವೈಪಲ್ಯ ಬಗ್ಗೆ ಖುದ್ದಾಗಿ ವಿವರಿಸುವಂತೆ ಇಬ್ಬರೂ ಉನ್ನತ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದಲ್ಲಿ ಸೋಮವಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯು ಏಕಕಾಲಕ್ಕೆ ಜರುಗಿದೆ. ಕೆಲವು ಭಾಗಗಳಲ್ಲಿ ಚುನಾವಣೋತ್ತರ ಭಾರಿ ಹಿಂಸಾಚಾರದ ಬಗ್ಗೆ ಮಂಗಳವಾರ ವರದಿಯಾಗಿದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ವೈಎಸ್‌‍ಆರ್‌ಸಿಪಿ ಮತ್ತು ಪ್ರತಿಪಕ್ಷ ಟಿಡಿಪಿ ನಾಯಕರು ಪರಸ್ಪರ ಆರೋಪ – ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

ಇದರ ಬೆನ್ನಲ್ಲೇ ಹಿಂಸಾಚಾರದ ಬಗ್ಗೆ ಚುನಾವಣಾ ಆಯೋಗವು ಗಮನ ಹರಿಸಿದೆ. ಮಾದರಿ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ ಎಂದು ರಾಜ್ಯ ಸರ್ಕಾರಕ್ಕೆ ನೆನಪಿಸಿರುವ ಆಯೋಗವು, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಜವಾಹರ್‌ ರೆಡ್ಡಿ ಮತ್ತು ಡಿಜಿಪಿ ಹರೀಶ್‌ ಕುಮಾರ್‌ ಗುಪ್ತಾ ಅವರಿಗೆ ಸೂಚಿಸಿದೆ. ಜೊತೆಗೆ ಈ ಚುನಾವಣೋತ್ತರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಆಡಳಿತ ವೈಪಲ್ಯ ಉಂಟಾಗಿದೆ. ಇದಕ್ಕೆ ಕಾರಣಗಳನ್ನು ಖುದ್ದಾಗಿ ಸಲ್ಲಿಸಬೇಕು ಎಂದು ತಾಕೀತು ಮಾಡಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ಆಯೋಗವು ಪದೇ ಪದೇ ಒತ್ತಿ ಹೇಳುತ್ತಿದೆ. ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಚುನಾವಣೆಯನ್ನು ಶಾಂತಿಯುತ ಮತ್ತು ಹಿಂಸಾಚಾರ ಮುಕ್ತವಾಗಿ ನಡೆಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ, ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದರಿಂದ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಚುನಾವಣಾ ಆಯೋಗಕ್ಕೆ ವಿವರಣೆ ನೀಡಲು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ತಿರುಪತಿಯ ಶ್ರೀ ಪದಾವತಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಇವಿಎಂ ಇಟ್ಟಿರುವ ಸ್ಟ್ರಾಂಗ್‌ ರೂಂ ಪರಿಶೀಲನೆಗೆ ಬಂದಿದ್ದ ಚಂದ್ರಗಿರಿ ಟಿಡಿಪಿ ಅಭ್ಯರ್ಥಿ ಪುಲಿವರ್ತಿ ನಾನಿ ಮೇಲೆ ದಾಳಿಯ ಯತ್ನ ನಡೆದಿದೆ. ವೈಎಸ್‌‍ಆರ್‌ಸಿಪಿ ಶಾಸಕ ಚೇವಿರೆಡ್ಡಿ ಭಾಸ್ಕರ ರೆಡ್ಡಿ ಅವರ ಪುತ್ರ ಹಾಗೂ ಪಕ್ಷದ ಹಾಲಿ ಅಭ್ಯರ್ಥಿ ಮೋಹಿತ್‌ ರೆಡ್ಡಿ ಅವರ ಬೆಂಬಲಿಗರು ಗುದ್ದಲಿ, ದೊಣ್ಣೆ, ಕಲ್ಲು, ಬಿಯರ್‌ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಪಲ್ನಾಡು ಜಿಲ್ಲೆಯಲ್ಲಿ ಕಾರಿಗೆ ಯಾರೋ ಕಲ್ಲು ಎಸೆದ ಘಟನೆಯಿಂದ ಟಿಡಿಪಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಅನಂತಪುರ ಜಿಲ್ಲೆಯ ತಾಡಿಪತ್ರಿಯಲ್ಲೂ ರಣರಂಗ ಸೃಷ್ಟಿಸಲಾಗಿದೆ. ಟಿಡಿಪಿ ಏಜೆಂಟರ ಮೇಲೆ ವೈಎಸ್‌‍ಆರ್‌ಸಿಪಿ ಏಜೆಂಟರು ಹಲ್ಲೆ ನಡೆಸಿದ್ದಾರೆ. ಬಳಿಕ ಕೇಂದ್ರ ಪಡೆಗಳು ಸ್ಥಳಕ್ಕಾಗಮಿಸಿ ಗಲಭೆಕೋರರನ್ನು ಚದುರಿಸಿವೆ.

RELATED ARTICLES

Latest News