Friday, September 20, 2024
Homeರಾಜ್ಯತುಂಗಭದ್ರಾ ಡ್ಯಾಮ್ ಸುರಕ್ಷತೆಗೆ ದೌಡಾಯಿಸಿದ ತಜ್ಞರು, ರೈತರಲ್ಲಿ ಹೆಚ್ಚಿದ ಆತಂಕ

ತುಂಗಭದ್ರಾ ಡ್ಯಾಮ್ ಸುರಕ್ಷತೆಗೆ ದೌಡಾಯಿಸಿದ ತಜ್ಞರು, ರೈತರಲ್ಲಿ ಹೆಚ್ಚಿದ ಆತಂಕ

ಕೊಪ್ಪಳ,ಆ.11- ತಾಲ್ಲೂಕಿನ ಮುನಿರಾಬಾದ್‌ ಬಳಿಯಿರುವ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್‌ಗೇಟ್‌ ಸರಪಳಿ ಕೊಂಡಿ ತುಂಡಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಜಲಾಶಯದ ಸುರಕ್ಷತೆಯ ಪ್ರಶ್ನೆ ಎದುರಾಗಿದೆ.

ನಿನ್ನೆ ರಾತ್ರಿ 9.30 ರಿಂದ 10 ಗಂಟೆ ಸಮಯದಲ್ಲಿ ಭಾರಿ ಶಬ್ದ ಕೇಳಿಬಂದಾಗ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 19ನೇ ಕ್ರಸ್ಟ್‌ಗೇಟ್‌ನ ಸಂಪರ್ಕ ಕೊಂಡಿ ಕತ್ತರಿಸಿ, ನೀರಿನ ರಭಸಕ್ಕೆ ಗೇಟ್‌ ಕೊಚ್ಚಿ ಹೋಗಿ ನಾಪತ್ತೆಯಾಗಿದೆ. ಇದೊಂದೇ ಗೇಟ್‌ನಿಂದ ಸುಮಾರು 35 ಸಾವಿರ ಕ್ಯೂಸೆಕ್‌ ನೀರು ರಭಸವಾಗಿ ಹೊರಹರಿಯುತ್ತಿದ್ದು, ಅದರ ಒತ್ತಡದ ಪರಿಣಾಮ ಅಕ್ಕಪಕ್ಕದ ಗೇಟ್‌ಗಳ ಮೇಲೂ ಉಂಟಾಗಿದೆ. ಇದರಿಂದಾಗಿ ಅಣೆಕಟ್ಟೆಯ ಸುರಕ್ಷತೆಯ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ರಾಜ್ಯಸರ್ಕಾರ ತುಂಗಭದ್ರಾ ಅಣೆಕಟ್ಟೆಯ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಅದೇ ಸಮಯದಲ್ಲಿ ರೈತರ ಬೆಳೆಗಳಿಗೆ ನೀರನ್ನು ಉಳಿಸಿಕೊಳ್ಳುವ ಹರಸಾಹಸವೂ ನಡೆಯುತ್ತಿದೆ. ರಾಜ್ಯದಿಂದಷ್ಟೇ ಅಲ್ಲ, ದೇಶವಿದೇಶದಿಂದಲೂ ಅಣೆಕಟ್ಟು ತಜ್ಞರನ್ನು ಕರೆಸಿಕೊಳ್ಳಲಾಗಿದೆ.

ಸ್ವತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡ ಅಣೆಕಟ್ಟೆಯ ಮೂಲ ನೀಲನಕ್ಷೆ ಹೈದ್ರಾಬಾದ್‌ನಲ್ಲಿದ್ದು, ನಿನ್ನೆ ರಾತ್ರಿಯೇ ಅಣೆಕಟ್ಟು ನಿರ್ಮಾಣದಲ್ಲಿ ಭಾಗಿಯಾಗಿದ್ದ ಇಂಜಿನಿಯರ್‌ಗಳನ್ನು ಸಂಪರ್ಕಿಸಿ, ಮಾಹಿತಿ ಪಡೆಯುವುದರ ಜೊತೆಗೆ ಮೂಲನಕ್ಷೆಯನ್ನೂ ಪಡೆದುಕೊಳ್ಳುವ ಪ್ರಯತ್ನ ನಡೆಸಲಾಯಿತು. ಅದೃಷ್ಟವಶಾತ್‌ ಬೆಳಿಗ್ಗೆಯ ವೇಳೆಗೆ ಮೂಲನಕ್ಷೆಯನ್ನು ಜಲಾಶಯದ ಬಳಿಗೆ ತರಲಾಗಿದೆ.

ಜಲಾಶಯದಲ್ಲಿ 1,633 ಅಡಿ ನೀರು ನಿಂತಿದ್ದು, ಒಟ್ಟು ಸಂಗ್ರಹ 105 ಟಿಎಂಸಿ ಎಂದು ಹೇಳಲಾಗಿದೆ. ಕ್ರಸ್ಟ್‌ಗೇಟ್‌ಗಳನ್ನು ದುರಸ್ಥಿ ಮಾಡಲು ಕನಿಷ್ಟ 20 ಅಡಿ ನೀರು ಕೆಳಗೆ ಇಳಿಯಬೇಕಿದೆ. ಅದಕ್ಕಾಗಿ 60 ಟಿಎಂಸಿಯಷ್ಟು ಹೊರಗೆ ಹರಿಸಬೇಕು. 19ನೇ ಕ್ರಸ್ಟ್‌ಗೇಟ್‌ನಲ್ಲಿ 35 ಸಾವಿರ ಕ್ಯೂಸೆಕ್‌ ಹರಿಯುತ್ತಿದ್ದು, ಉಳಿದ 33 ಕ್ರಸ್ಟ್‌ಗೇಟ್‌ಗಳ ಪೈಕಿ 29 ಗೇಟ್‌ಗಳನ್ನು ತೆಗೆದು ಸರಿಸುಮಾರು 1.50 ಲಕ್ಷ ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಲಾಗುತ್ತಿದೆ.

ಸರಾಸರಿ 2.50 ಲಕ್ಷ ಕ್ಯೂಸೆಕ್‌ ನೀರನ್ನು ಹೊರಗೆ ಹರಿಸಿದರೆ 2-3 ದಿನಗಳಲ್ಲಿ 60 ಟಿಎಂಸಿ ಖಾಲಿಯಾಗಿ ದುರಸ್ಥಿ ಕಾರ್ಯಕ್ಕೆ ಅವಕಾಶವಾಗಬಹುದು ಎಂಬ ಮಾಹಿತಿ ಇದೆ.ಇಷ್ಟೂ ನೀರನ್ನು ಹೊರಗೆ ಹರಿಸಿದರೆ ರೈತರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕಕಗಳೂ ಕೇಳಿಬಂದಿವೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದಾಗಿ ವಾಡಿಕೆಗಿಂತಲೂ ಮೊದಲೇ ಜುಲೈ ಎರಡನೇ ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು.

ಎರಡು ಬೆಳೆಗಳನ್ನು ಬೆಳೆಯಬಹುದು ಎಂಬ ಸಂತಸದಲ್ಲಿ ರೈತರಿದ್ದರು. ರಾಜ್ಯದ 10 ಲಕ್ಷ ಹೆಕ್ಟೇರ್‌, ನೆರೆಯ ಆಂಧ್ರಪ್ರದೇಶದಲ್ಲಿ 6 ಲಕ್ಷ ಹೆಕ್ಟೇರ್‌ ಜಮೀನುಗಳ ರೈತರು ಬಂಪರ್‌ ಬೆಲೆಯ ನಿರೀಕ್ಷೆಯಲ್ಲಿದ್ದಾಗಲೇ ಕ್ರಸ್ಟ್‌ಗೇಟ್‌ ಛಿದ್ರಗೊಂಡಿರುವುದು ಕೃಷಿಕರ ಕನಸನ್ನು ಭಗ್ನಗೊಳಿಸಿದೆ.ಒಂದು ವೇಳೆ 60 ಟಿಎಂಸಿಯನ್ನು ಹೊರಗೆ ಹರಿಸಿದರೆ ಒಂದು ಬೆಳೆಗೂ ನೀರು ಸಾಲುವುದಿಲ್ಲ ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯನ್ನು ನಿಭಾಯಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕವಿದೆ.

ರಾಜ್ಯಸರ್ಕಾರ ಜಲಾಶಯದಲ್ಲಿ ನೀರನ್ನು ಉಳಿಸಿಕೊಂಡು ಕ್ರಸ್ಟ್‌ಗೇಟ್‌ ದುರಸ್ಥಿ ಮಾಡುವ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ. ಆದರೆ ನೀರಿನ ರಭಸ ಅಪಾಯಮಟ್ಟ ಮೀರಿದ್ದು, ಈ ಹಂತದಲ್ಲಿ ಕ್ರಸ್ಟ್‌ಗೇಟ್‌ ಬಳಿ ಧಾವಿಸುವುದು ಮಾರಣಾಂತಿಕ ಎಂದು ಹೇಳಲಾಗುತ್ತಿದೆ.
ನೀರಿನ ಮಟ್ಟ ತಗ್ಗಿದರೆ ಕ್ರೇನ್‌ ಮುಖಾಂತರ ಎರಡು ಹಂತದಲ್ಲಿ ಕ್ರಸ್ಟ್‌ಗೇಟ್‌ಗಳನ್ನು ಜೋಡಿಸಿ ದುರಸ್ಥಿ ಮಾಡಲು ಸಾಧ್ಯ ಎಂದು ತಿಳಿದುಬಂದಿದೆ.

ಏಕಾಏಕಿ ಅಷ್ಟೂ ನೀರನ್ನು ಒಮೆಲೇ ಹೊರಗೆ ಹರಿಸಿದರೆ ನದಿಪಾತ್ರದ ಕಾಲುವೆಗಳ ಗ್ರಾಮಗಳು ಮುಳುಗಡೆಯಾಗುವ ಅಥವಾ ಕೊಚ್ಚಿಹೋಗುವ ಅಪಾಯವಿದೆ. ನೀರನ್ನು ಹೊರಗೆ ಬಿಡದೇ ಇದ್ದರೆ 69 ವರ್ಷಗಳ ಹಿಂದೆ ಅಳವಡಿಸಲಾಗಿರುವ ಹಳೆಯ ಸಂಪರ್ಕ ಸರಪಳಿಗಳು ಒತ್ತಡಕ್ಕೆ ಒಳಗಾಗಿ ತುಂಡಾಗುವ, ಇದರಿಂದ ಅಣೆಕಟ್ಟೆಗೆ ಅಪಾಯವಾಗುವ ಆತಂಕವೂ ಇದೆ.

ಈಗ ತುಂಡಾಗಿರುವ 19ನೇ ಕ್ರಸ್ಟ್‌ಗೇಟ್‌ 17 ವರ್ಷಗಳ ಹಿಂದೆ ಇದೇ ರೀತಿ ಅಪಾಯಕ್ಕೆ ಸಿಲುಕಿತ್ತು. ಆಗ ದುರಸ್ಥಿ ಮಾಡಿ ಗೇಟ್‌ ಅನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ನೀರನ್ನು ಹೊರಗೆ ಬಿಡಲು 19ನೇ ಕ್ರಸ್ಟ್‌ಗೇಟ್‌ ಅನ್ನು ಬಳಸುತ್ತಿರಲಿಲ್ಲ. ಆದರೆ 17 ವರ್ಷಗಳ ಹಿಂದಿನ ವೆಲ್ಡಿಂಗ್‌ ಏಕಾಏಕಿ ತುಂಡಾಗಿದೆ ಎಂದು ಹೇಳಲಾಗಿದೆ.

ಹೀಗಾಗಿ ರಾಜ್ಯಸರ್ಕಾರ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದ್ದು, ದೇಶ-ವಿದೇಶಗಳ ತಜ್ಞರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಥಳಕ್ಕೆ ತೆರಳಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ್‌ತಂಗಡಗಿ ಹಾಗೂ ಜನಪ್ರತಿನಿಧಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಜಲಸಂಪನೂಲ ಇಲಾಖೆಯ ಹಿರಿಯ ಅಧಿಕಾರಿಗಳು, ತಜ್ಞರು ಬೀಡುಬಿಟ್ಟಿದ್ದು ಅಣೆಕಟ್ಟೆಯ ಸುರಕ್ಷತೆಗೆ ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.

RELATED ARTICLES

Latest News