Thursday, November 21, 2024
Homeಬೆಂಗಳೂರುಪೊಲೀಸರಿಗೆ ತಲೆನೋವಾದ ಹುಸಿಬಾಂಬ್‌ ಇ-ಮೇಲ್‌ ಪ್ರಕರಣಗಳು

ಪೊಲೀಸರಿಗೆ ತಲೆನೋವಾದ ಹುಸಿಬಾಂಬ್‌ ಇ-ಮೇಲ್‌ ಪ್ರಕರಣಗಳು

ಬೆಂಗಳೂರು,ಮೇ 18- ಆಧುನಿಕ ತಂತ್ರಜ್ಞಾನ ಬೆಳೆದಂತೆ ಅಪರಾಧ ಚಟುವಟಿಕೆಗಳು ಬದಲಾಗಿದ್ದು, ಪಿಕ್‌ಪಾಕೆಟ್‌, ಸರಗಳ್ಳರನ್ನು ಹಿಡಿಯುತ್ತಿದ್ದ ಪೊಲೀಸರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೈಬರ್‌ ಹಣಕಾಸು ವಂಚನೆ, ಕ್ರಿಪ್ಟೋ ಕರೆನ್ಸಿಯಂತಹ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸುತ್ತಿರುವ ಬೆಂಗಳೂರು ಪೊಲೀಸರಿಗೆ ಹುಸಿಬಾಂಬ್‌ ಇ-ಮೇಲ್‌ಗಳು ತಲೆನೋವಾಗಿ ಪರಿಣಮಿಸಿವೆ.

ಕಳೆದ 2 ವರ್ಷಗಳಿಂದ ನಗರದ ಪ್ರತಿಷ್ಠಿತ ಶಾಲಾ-ಕಾಲೇಜು, ಮ್ಯೂಸಿಯಂ, ಆಸ್ಪತ್ರೆ, ವಿಮಾನ ನಿಲ್ದಾಣಗಳಿಗೆ ಬೆದರಿಕೆ ಇ-ಮೇಲ್‌ಗಳು ಬರುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರಿಗೆ ವಿದೇಶದಲ್ಲಿ ಕುಳಿತು ವಿಪಿಎನ್‌ ಮುಖಾಂತರ ಹುಸಿಬಾಂಬ್‌ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸುತ್ತಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ ಬೆದರಿಕೆಯ ಮಾಹಿತಿ ಬಂದ ತಕ್ಷಣ ಸ್ಥಳೀಯ ಠಾಣೆ ಪೊಲೀಸರು ಬಾಂಬ್‌ ಸ್ಕ್ವಾಡ್‌, ಶ್ವಾನ ದಳದೊಂದಿಗೆ ಧಾವಿಸಿ, ಆ ಸ್ಥಳವನ್ನು ಪರಿಶೀಲಿಸಿ ಅಲ್ಲಿ ಯಾವುದೇ ಸ್ಫೋಟಕ ವಸ್ತು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಿಟ್ಟುಸಿರುಬಿಡುತ್ತಿದ್ದಾರೆ.

ಇಂತಹ ಬೆದರಿಕೆಗಳನ್ನು ತಡೆಗಟ್ಟಲು ನಗರದ ಹಿರಿಯ-ಕಿರಿಯ ಪೊಲೀಸ್‌‍ ಅಧಿಕಾರಿಗಳು ಅಧಿಕಾರಿಗಳು ಹಗಲು-ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಳೆದ ಮಾರ್ಚ್‌ನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ಸ್ಫೋಟದ ನಂತರ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನೈಟ್‌ಬೀಟ್‌ ಪೊಲೀಸ್‌‍ ಗಸ್ತುಗಳ ಬಗ್ಗೆ ಆಯುಕ್ತರು ಕಾಲಕಾಲಕ್ಕೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಈ ಕುರಿತು ವಿಪಿಎನ್‌ ಸಂಸ್ಥೆಗಳಿಗೆ ಮನವಿ ಮಾಡಿದರೂ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ಸಹ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಪದೇಪದೇ ಹುಸಿಬಾಂಬ್‌ ಇ-ಮೇಲ್‌ ಬೆದರಿಕೆ ಕರೆಗಳು ನಗರದ ಪೊಲೀಸರ ನಿದ್ದೆಗೆಡಿಸಿದೆ.

RELATED ARTICLES

Latest News