ಬೆಂಗಳೂರು,ನ.13- ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಸುಮಾರು 45 ವರ್ಷ ವಯಸ್ಸಿನ ಬೋಳು ತಲೆಯ ವ್ಯಕ್ತಿಯೇ ಉಡುಪಿಯ ನೇಜಾರಿನ ತೃಪ್ತಿನಗರದಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಹತ್ಯೆ ಮಾಡಿರುವ ಆರೋಪಿ ಎಂದು ಶಂಕಿಸಲಾಗಿದೆ. ದುಬೈನಲ್ಲಿ ಉದ್ಯೋಗದಲ್ಲಿರುವ ನೂರ್ ಮಹಮ್ಮದ್ ಅವರ ಪತ್ನಿ ಹಸೀನಾ ಮತ್ತು ಅವರ ಮೂವರು ಮಕ್ಕಳ ಹತ್ಯೆ ಮತ್ತು ವೃದ್ಧೆ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಜಿಲ್ಲಾ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ತಾಯಿ ಮತ್ತು ಅವರ ಮೂವರು ಮಕ್ಕಳನ್ನು ಅಮಾನವೀಯವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಈಗಾಗಲೇ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಈಗಾಗಲೇ ಆರೋಪಿ ಬಗ್ಗೆ ಕೆಲ ಮಾಹಿತಿಗಳು ದೊರೆತಿದ್ದು, ಪೊಲೀಸರ ಅನುಮಾನ 45 ವರ್ಷದ ಬೋಳು ತಲೆಯ ವ್ಯಕ್ತಿಯ ಮೇಲೆ ಬಿದ್ದಿದ್ದು, ಆತನ ಬಂಧನಕ್ಕಾಗಿ ಜಾಲ ಬೀಸಿದ್ದಾರೆ. ಕೊಲೆಯಾದ ದಿನ ಬೋಳು ತಲೆಯ ವ್ಯಕ್ತಿಯನ್ನು ಸಂತೆಕಟ್ಟೆಯಿಂದ ತೃಪ್ತಿನಗರಕ್ಕೆ ಡ್ರಾಪ್ ಮಾಡಿದೆ ಆತ ಬಿಳಿ ಅಂಗಿ ಧರಿಸಿದ್ದ ಬೆಳಿಗ್ಗೆ 8.30 ರಲ್ಲಿ ಆತನನ್ನು ಡ್ರಾಪ್ ಮಾಡಿದ್ದೇ ಆದರೆ, ಅದೇ ವ್ಯಕ್ತಿ ಒಂದು ಗಂಟೆಯ ನಂತರ ಸಂತೆಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಎಂದು ಸ್ಥಳೀಯ ಆಟೋ ಚಾಲಕ ನೀಡಿರುವ ಮಾಹಿತಿ ಹಂತಕನ ಬಂಧನಕ್ಕೆ ಪೊಲೀಸರಿಗೆ ಮಹತ್ವದ ಸುಳಿವು ನೀಡಿದೆ.
ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ
ಆಟೋ ಚಾಲಕನ ಮಾಹಿತಿ ಮೇರೆಗೆ ಪರಾರಿಯಾಗಿರುವ ಬೋಳು ತಲೆ ವ್ಯಕ್ತಿಯ ಬಂಧನಕ್ಕಾಗಿ ಶೋಧ ಮುಂದುವರೆಸಲಾಗಿದೆ. ಆತ ಸಂತೆಕಟ್ಟೆಯಿಂದ ಯಾವ ಕಡೆ ತೆರಳಿದ. ಇಲ್ಲವೇ ಆತನ ನಿವಾಸ ಅಕ್ಕಪಕ್ಕದಲ್ಲೇ ಇರಬಹುದೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗ್ಗೆ ಮನೆಗೆ ನುಗ್ಗಿದ ಹಂತಕ ಮೊದಲು ಅಡುಗೆ ಮನೆಯಲ್ಲಿದ್ದ ಹಸೀನಾ ಅವರನ್ನು ಕೊಲೆ ಮಾಡಿದ, ಆಕೆಯನ್ನು ಬಿಡಿಸಿಕೊಳ್ಳಲು ಬಂದ ಮಕ್ಕಳನ್ನು ನಿರ್ದಯಿಯಾಗಿ ಕೊಂದು ಹಾಕಿ ನಂತರ ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ನೋಡಿದರೆ ಆತನಿಗೆ ಹಸೀನಾ ಕುಟುಂಬದ ಮೇಲೆ ಎಷ್ಟು ದ್ವೇಷ ಇತ್ತು ಎನ್ನುವುದಕ್ಕೆ ಉದಾಹರಣೆಯಾಗಿದೆ. ಅದರಲ್ಲೂ ಆತ ಕೃತ್ಯದ ನಂತರ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗದಿರುವುದನ್ನು ನೋಡಿದರೆ ವೈಯಕ್ತಿಕ ಕಾರಣದಿಂದಾಗಿ ಆತ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಪೊಲೀಸರು.
ಈ ಮಧ್ಯೆ ದುಬೈನಲ್ಲಿ ಉದ್ಯೋಗದಲ್ಲಿದ್ದ ಪತಿ ನೂರ್ ಮಹಮ್ಮದ್ ಹಾಗೂ ಬೆಂಗಳೂರಿನ ಏರ್‍ಪೆಪೊರ್ಟ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ರ ನೇಜಾರಿಗೆ ಆಗಮಿಸಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಎಫ್‍ಎಸ್‍ಎಲ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಹಂತಕ ಬಿಟ್ಟು ಹೋಗಿರಬಹುದಾದ ಸಾಕ್ಷ್ಯ ಸಂಗ್ರಹದಲ್ಲಿ ನಿರತರಾಗಿದ್ದಾರೆ.