ಬೆಳಗಾವಿ,ಡಿ.4-ಬರಗಾಲದ ಸಂಕಷ್ಟದ ನಡುವೆಯೂ ರಾಜ್ಯದ ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿಯವರ ಪ್ರಶ್ನೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಉತ್ತರಿಸಿದ ಅವರು, ರಾಜ್ಯದಲ್ಲಿ ಈ ಬಾರಿ ತಮ್ಮ ನಿರೀಕ್ಷೆಗೆ ತಕ್ಕಂತೆ ಮಳೆ ಬಾರದ ಕಾರಣ ಬರಗಾಲ ಆವರಿಸಿ ವಿದ್ಯುತ್ ಸಮಸ್ಯೆಯಾಗಿದೆ ಎಂಬುದನ್ನು ಒಪ್ಪಿಕೊಂಡರು.
ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೂ ಸರ್ಕಾರ ರೈತರಿಗೆ ತೊಂದರೆಯಾಗದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ರೈತರ ಕೃಷಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ ಎಂದರು.
ವಿವಿಧ ಭಾಗಗಳಲ್ಲಿ ಹೆಚ್ಚು ಪೂರೈಕೆ ಮಾಡಬೇಕೆಂಬ ಬೇಡಿಕೆಯಿದೆ. ಭತ್ತ ಮತ್ತು ಕಬ್ಬು ಬೆಳೆಯುತ್ತಿರುವ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಹಗಲಿನಲ್ಲಿ ನಾಲ್ಕು ಗಂಟೆ, ರಾತ್ರಿ 3 ಗಂಟೆ ಸೇರಿದಂತೆ ಒಟ್ಟು 7 ಗಂಟೆ ಕಾಲ ವಿದ್ಯುತ್ ಪೂರೈಸುತ್ತಿದ್ದೇವೆ.
ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಬಳಕೆಯ ಪ್ರಮಾಣ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬರಗಾಲ ಆವರಿಸಿರುವ ಕಾರಣ ಸರ್ಕಾರ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿದೆ. ಸೆಕ್ಷನ್ 6ರ ಪ್ರಕಾರ ನಮ್ಮ ರಾಜ್ಯದಲ್ಲಿ ಉತ್ಪಾದನೆ ಮಾಡಿದ ವಿದ್ಯುತ್‍ನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆ ನಿರ್ಬಂಧ ಹಾಕಿದ್ದೇವೆ. ಅಲ್ಲದೆ ಹರಿಯಾಣ, ಪಂಜಾಬ್‍ನಿಂದಲೂ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸ್ನೇಹಿತರ ಜೊತೆ ಸೇರಿ ತಂಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ ಅಣ್ಣ
ಸದ್ಯಕ್ಕೆ ರೈತರಿಗೆ ದಿನಕ್ಕೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಕಬ್ಬು ಬೆಳೆಗಾರರಿಗೆ ತೊಂದರೆಯಾಗದಂತೆ ವಿದ್ಯುತ್ ಒದಗಿಸುತ್ತಿದ್ದೇವೆ. ಒಂದೂವರೆ ತಿಂಗಳು ಸ್ವಲ್ಪ ಮಟ್ಟಿಗೆ ತೊಂದರೆಯಾಗಿದ್ದು ನಿಜ. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು. ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು, ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ಗ್ರಾಮೀಣ ಭಾಗಗಳಲ್ಲಿ ಸಕಾಲಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ವೈ.ನಾರಾಯಣಸ್ವಾಮಿ ಮತ್ತಿತರರು ಕಿಡಿಕಾರಿದರು.
ಇದಕ್ಕೆ ತಿರುಗೇಟು ಕೊಟ್ಟ ಕಾಂಗ್ರೆಸ್ ಸದಸ್ಯರು, ನಿಮ್ಮ ಕಾಲದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದ್ದೀರಿ. ಒಂದೇ ಒಂದು ಯೂನಿಟ್ ಉತ್ಪಾದನೆ ಮಾಡದೆ ನಿಮ್ಮಿಂದ ನಾವೇನು ಪಡೆಯುವುದಿದೆ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಆಗ ಸಭಾಪತಿಯವರು ತಮ್ಮ ಪೀಠದಿಂದ ಎದ್ದು ನಿಂತು ಸದಸ್ಯರನ್ನು ಹೊರತುಪಡಿಸಿ ಯಾರೂ ಮಾತನಾಡಬಾರದು. ನಾನು ಈ ವಿಷಯದ ಬಗ್ಗೆ ಚರ್ಚಿಸಲು ಅರ್ಧ ಗಂಟೆ ಸಮಯ ಕೊಡುವುದಾಗಿ ಹೇಳಿದಾಗ ಚರ್ಚೆಗೆ ತೆರೆ ಬಿದ್ದಿತು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬರದಿಂದ ನೀರಾವರಿ ಅವಲಂಬಿತ ಬೆಳೆಗಾರರಿಗೆ ಆತಂಕ ಆಗಿದೆ. ಸರ್ಕಾರ 7 ಗಂಟೆಗಳ ವಿದ್ಯುತ್ ಪೂರೈಸುವುದಾಗಿ ಹೇಳಿ.ಅವರು ಕೇವಲ 3 ತಾಸು ವಿದ್ಯುತ್ ಕೊಡುತ್ತೀದ್ದಿರಿ. ಮಧ್ಯರಾತ್ರಿ 2-3 ಗಂಟೆಗೆ ವಿದ್ಯುತ್ ಕೊಡುತ್ತಿದ್ದಾರೆ ರೈತರಿಗೆ ಇದರಿಂದ ಬಹಳ ಸಮಸ್ಯೆ ಆಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದರು.
ಸರ್ಕಾರದ ವಾಗ್ದಾನ ಮಾತ್ರ ಜಾರಿ ಆಗುತ್ತಿಲ್ಲ. ವಿದ್ಯುತ್ ಸಿಗುತ್ತಾ ಇದ್ದರೆ ಮೊಸಳೆಯನ್ನು ತಂದು ರೈತರು ಯಾಕೆ ಪ್ರತಿಭಟನೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದರು.