ನವದೆಹಲಿ,ಜೂ.18- ಹೆದ್ದಾರಿಗಳಲ್ಲಿ ಸಂಚಾರಿಸುವಾಗ ಟೋಲ್ ಪಾವತಿ ವೇಳೆ ನೋಂದಾವಣಿ ಮಾಡಿಕೊಳ್ಳುವ ವಾಹನ ಮಾಲೀಕರಿಗಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಆಗಸ್ಟ್ 15 ರಿಂದ ವಾರ್ಷಿಕ ಪಾಸ್‌ಗಳನ್ನು ಜಾರಿಗೊಳಿಸುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಾರ್ಷಿಕ ಪಾಸ್‌ಗಳನ್ನು ಪ್ರಕಟಿಸಿದ್ದು, ಇದು ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರದ ಮಹತ್ವದ ಉಪಕ್ರಮವಾಗಿದೆ ಎಂದಿದ್ದಾರೆ.ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ಗಳು 2025ರ ಆಗಸ್ಟ್ 15 ರಿಂದ ಅನುಷ್ಠಾನಕ್ಕೆ ಬರಲಿದೆ. ಪಾಸ್‌ಗಳು ಸಕ್ರಿಯಗೊಂಡ ಬಳಿಕ ಒಂದು ವರ್ಷ ಕಾಲಾವಧಿಯನ್ನು ಅಥವಾ ಗರಿಷ್ಠ 20 ಟ್ರಿಪ್‌ಗಳಿಗೆ ಅಸ್ತಿತ್ವದಲ್ಲಿರಲಿವೆ. ಇವರೆಡರಲ್ಲಿ ಯಾವುದು ಮೊದಲೋ ಅದಕ್ಕೆ ವಾರ್ಷಿಕ ಪಾಸ್ ಅನ್ವಯಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ವಾಣೀಜ್ಯೇತರ ಕಾರು, ಜೀಪು ಮತ್ತು ವ್ಯಾನ್‌ಗಳು ಈ ಪಾಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ವಾರ್ಷಿಕ ಪಾಸ್‌ನ ಮೊತ್ತವನ್ನು 3 ಸಾವಿರ ಎಂದು ನಿಗದಿಪಡಿಸಲಾಗಿದೆ. ಇದು ಪರಿಣಾಮಕಾರಿ ವೆಚ್ಚ ತಗ್ಗಿಸಲಿದ್ದು, ದೇಶಾದ್ಯಂತ ಎಲ್ಲಾ ಹೆದ್ದಾರಿಗಳಲ್ಲೂ ತಡೆರಹಿತ ಪ್ರಯಾಣಕ್ಕೆ ಪೂರಕವಾಗಿದೆ ಎಂದು ವಿವರಿಸಿದ್ದಾರೆ.
ಪಾಸ್ ಖರೀದಿ ಸಕ್ರಿಯಗೊಳಿಸುವಿಕೆ ಹಾಗೂ ನವೀಕರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಲ್ಲಿನ ಪ್ರತ್ಯೇಕ ಲಿಂಕ್ ಅನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.
ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ನಲ್ಲೂ ಪಾಸ್‌ಗಳನ್ನು ಖರೀದಿಸಬಹುದಾಗಿದೆ. ಕೈಗೆಟಕುವ ದರದಲ್ಲಿ ಹೆದ್ದಾರಿ ಸಂಚಾರಿ ವ್ಯವಸ್ಥೆ ಜಾರಿಗೊಳ್ಳಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಈ ಮೂಲಕ ಬಗೆಹರಿಸಲಾಗಿದೆ. 60 ಕಿ.ಮೀ. ಅಂತರದಲ್ಲಿ ಟೋಲ್‌ಪ್ಲಾಸಾಗಳಿಗೆ ಪದೇಪದೇ ಶುಲ್ಕ ಪಾವತಿಸುವ ಅನಿವಾರ್ಯತೆ ತಪ್ಪಲಿದ್ದು, ಟೋಲ್‌ಗಳಲ್ಲಿನ ತಗಾದೆಗಳನ್ನು ಕಡಿಮೆ ಮಾಡಲಿದೆ. ಲಕ್ಷಾಂತರ ಖಾಸಗಿ ವಾಹನ ಮಾಲೀಕರ ಸುಲಭ ಸಂಚಾರಕ್ಕೆ ಇದು ಮಹತ್ವದ ಉಪಕ್ರಮ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಪಾಕ್ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಏರ್ಪಡಿಸಿದ ಟ್ರಂಪ್
- ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆಹೋದ ಐಪಿಎಸ್ ಅಧಿಕಾರಿ ಶ್ರೀನಿವಾಸ ಜೋಶಿ
- ಶುಕ್ಲಾ ಬಾಹ್ಯಾಕಾಶ ಪ್ರಯಾಣ ಮತ್ತೆ ಮುಂದೂಡಿಕೆ
- ಚಿಕ್ಕಬಳ್ಳಾಪುರ : ಬೈಕ್ಗೆ ಕ್ಯಾಂಟರ್ ಡಿಕ್ಕಿಯಾಗಿ ಯುವಕರಿಬ್ಬರ ಸಾವು
- ಆಗ್ರಾ : ಮೇಲ್ಸೆತುವೆಯಿಂದ ಲಾರಿ ಉರುಳಿ ಬಿದ್ದು ನಾಲ್ವರ ದುರ್ಮರಣ