Friday, May 3, 2024
Homeರಾಜ್ಯರಣಬಿಸಿಲಿನ ಎಫೆಕ್ಟ್ : ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಭೀತಿ, 14 ಮಂದಿಗೆ ಕಾಲರಾ ದೃಢ

ರಣಬಿಸಿಲಿನ ಎಫೆಕ್ಟ್ : ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಭೀತಿ, 14 ಮಂದಿಗೆ ಕಾಲರಾ ದೃಢ

ಬೆಂಗಳೂರು,ಏ.8- ರಾಜ್ಯದಲ್ಲಿ ರಣರಣ ಬಿಸಿಲಿನ ಬೇಗೆಯ ನಡುವೆ ಕಾಲರಾ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 14 ಕಾಲರಾ ದೃಢಪಟ್ಟಿದ್ದು, ಆತಂಕವನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ 13 ಕಾಲರಾ ಪ್ರಕರಣಗಳು ದಾಖಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 8, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 5 ಕಾಲರಾ ರೋಗದ ಪ್ರಕರಣಗಳು ದೃಢಪಟ್ಟಿದ್ದು, ರಾಮನಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಕಳೆದ 3 ತಿಂಗಳಲ್ಲಿ 14 ಕಾಲರಾ ರೋಗದ ಪ್ರಕರಣಗಳು ದೃಢಪಟ್ಟಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕಾಲರಾ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಲುಷಿತ ನೀರಿನಿಂದ ಈ ರೋಗ ಹರಡುವುದರಿಂದ ಜನ ಕಾದಾರಿಸಿದ ನೀರು ಕುಡಿಯುವುದು ಉತ್ತಮ. ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದೆ. ಬಹುತೇಕ ಕಡೆ ಕುಡಿಯುವ ನೀರಿಗೆ ಆಹಾಕಾರ ಶುರುವಾಗಿದೆ. ಕಲುಷಿತ ನೀರು, ಕಲುಷಿತ ಆಹಾರ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಕಾಲರಾ ರೋಗಲಕ್ಷಣಗಳು ಪತ್ತೆಯಾಗುತ್ತಿವೆ.

ಬೆಂಗಳೂರು ನಗರದಲ್ಲಿ ಮಾರ್ಚ್‍ನಲ್ಲಿ 2 ಹಾಗೂ ಏಪ್ರಿಲ್‍ನಲ್ಲಿ 3 ರಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್‍ನಲ್ಲಿ 5 ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.ಬೇಸಿಗೆ ಕಾಲದಲ್ಲಿ ಕಾಲರಾ ರೋಗವು ಉಲ್ಭಣಗೊಳ್ಳುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಿದೆ.

ಜನರು ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ ಬಿಸಿನೀರು ಕುಡಿಯಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಆಯುಕ್ತರಾದ ಡಿ.ರಂದೀಪ್ ತಿಳಿಸಿದ್ದಾರೆ.ವಾಂತಿಬೇಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಬಿಎಂಸಿಆರ್‍ಐ ಮಹಿಳಾ ಹಾಸ್ಟೆಲ್‍ನ 47 ವಿದ್ಯಾರ್ಥಿನಿಯರ ಪೈಕಿ ಮೂವರಲ್ಲಿ ಕಾಲರಾ ಸೋಂಕು ಪತ್ತೆಯಾಗಿದೆ. ಕೆಲವರಿಗೆ ಹ್ಯಾಂಗಿಂಗ್ ಡ್ರಾಪ್ ವಿಧಾನದ ಹಾಗೂ ಕಲ್ಚರ್ ಪರೀಕ್ಷೆ ಮಾಡಲಾಗಿದ್ದು, ಇಬ್ಬರಲ್ಲಿ ವಿಬ್ರಿಯೋ ಕಾಲರಾ ಪತ್ತೆಯಾಗಿದೆ. ಮತ್ತೊಬ್ಬರಿಗೂ ಪರೀಕ್ಷೆ ನಡೆಸಲಾಗಿದ್ದು, ಇವರಿಗೂ ಪಾಸಿಟೀವ್ ಕಂಡುಬಂದಿದೆ.

ಕಲ್ಚರ್ ಪರೀಕ್ಷೆ ವರದಿ ಬಂದ ನಂತರವಷ್ಟೇ ಕಾಲರಾ ಇದೆಯೋ, ಇಲ್ಲವೋ ಎಂಬ ಬಗ್ಗೆ ದೃಢಪಡಲಿದೆ. ಆಸ್ಪತ್ರೆಗೆ ಸೇರಿದ್ದ ವಿದ್ಯಾರ್ಥಿನಿಯರಲ್ಲಿ 13 ವಿದ್ಯಾರ್ಥಿನಿಯರು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮತ್ತೋರ್ವ ವಿದ್ಯಾರ್ಥಿನಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಉಳಿದ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮ:
ಕಲುಷಿತ ಆಹಾರ ಸೇವನೆಯಿಂದ ದೂರವಿರಿ. ವಾಂತಿ ಬೇಧಿ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ರಸ್ತೆಬದಿ ಶುಚಿತ್ವವಿಲ್ಲದೆ ಮಾರಾಟ ಮಾಡುವ ಆಹಾರ, ಪಾನೀಯ ಸೇವನೆ ಬೇಡ, ಹಸಿ ಆಹಾರ, ಶೆಲ್‍ಫಿಶ್ ಸೇವಿಸಬೇಡಿ, ತರಕಾರಿ-ಹಣ್ಣಿನ ಜ್ಯೂಸ್, ರಾಗಿಗಂಜಿಯಂತಹ ದ್ರವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ನೀವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ರೋಗ-ರುಜಿನಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

RELATED ARTICLES

Latest News