ಬೆಂಗಳೂರು,ಮೇ 14- ಮಹಿಳೆಯ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿನ್ನೆ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನ್ಯಾಯಾಂಗ ಬಂಧನದಿಂದ ಇಂದು ಬಿಡುಗಡೆಯಾದರು.ನಿನ್ನೆ ಸಂಜೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಲಯದ ಆದೇಶ ಪ್ರತಿಯನ್ನು ನಿನ್ನೆ ಸಂಜೆ 7 ಗಂಟೆಯೊಳಗೆ ಜೈಲಿನ ಅಧಿಕಾರಿಗಳಿಗೆ ತಲುಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೇವಣ್ಣ ಅವರು ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ.
ಇಂದು ಬೆಳಿಗ್ಗೆ ರೇವಣ್ಣರ ಪರ ವಕೀಲರು ಆದೇಶದ ಪ್ರತಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ತಲುಪಿಸಿ ಜಾಮೀನು ಷರತ್ತು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ರೇವಣ್ಣ ಅವರ ಬಿಡುಗಡೆಯಾಯಿತು.
ಈ ಮೂಲಕ ರೇವಣ್ಣ ಅವರ 6 ದಿನಗಳ ಸೆರೆವಾಸ ಅಂತ್ಯವಾಯಿತು. ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ರೇವಣ್ಣ ಅವರು ಈ ಪ್ರಕರಣದಲ್ಲಿ ಅಮಾಯಕರು ಯಾವುದೇ ತಪ್ಪೆಸಗಿಲ್ಲ. ಅವರ ವಿರುದ್ಧದ ಆರೋಪದ ಪುಷ್ಟೀಕರಿಸುವ ಸಂದರ್ಭ ಸಾಕ್ಷಿಗಳಿಲ್ಲ. ಅವರು ಯಾರಿಗೂ ಬೆದರಿಕೆಯೊಡ್ಡಿಲ್ಲ ಎಂದು ರೇವಣ್ಣ ಪರ ವಕೀಲರಾದ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿದ್ದರು.
ಸರ್ಕಾರಿ ಪರ ವಿಶೇಷ ಅಭಿಯೋಜಕರಾದ ಜಾಯ್ನ ಕೊಥಾರಿ ಹಾಗೂ ಅಶೋಕ್ ನಾಯಕ್ ಎಸ್‌ಐಟಿ ಪರವಾಗಿ ವಾದ ಮಂಡಿಸಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ರೇವಣ್ಣ ಅವರಿಗೆ ಹಲವು ಷರತ್ತುಗಳನ್ನು ವಿಧಿಸಿ ನಿನ್ನೆ ಜಾಮೀನು ಮಂಜೂರು ಮಾಡಿತ್ತು.