Friday, December 13, 2024
Homeರಾಷ್ಟ್ರೀಯ | Nationalನಕಲಿ ಇ-ಬ್ಯಾಂಕ್ ಗ್ಯಾರಂಟಿಗಳಿಂದ ಬ್ಯಾಂಕುಗಳಿಗೆ 168 ಕೋಟಿ ವಂಚಿಸಿದ್ದ ಖತರ್ನಾಕ್ ಜಾಲ ಬಯಲು

ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳಿಂದ ಬ್ಯಾಂಕುಗಳಿಗೆ 168 ಕೋಟಿ ವಂಚಿಸಿದ್ದ ಖತರ್ನಾಕ್ ಜಾಲ ಬಯಲು

ಬೆಂಗಳೂರು,ಮಾ.26- ಬ್ಯಾಂಕ್ ಸಾಲಗಳಿಗೆ ನೀಡಲಾಗುವ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ 168 ಕೋಟಿ ರೂ.ಗಳ ಮೊತ್ತದ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ಕೈಗೊಂಡ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ವಿದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಪಡೆಯುವ ಸಾಲಗಳಿಗೆ ಸಂಬಂಧಪಟ್ಟವರು ನೀಡುವ ಇ-ಬ್ಯಾಂಕ್ ಗ್ಯಾರಂಟಿಗಳ ನೈಜತೆಯನ್ನು ರಾಷ್ಟ್ರೀಯ ಇ -ಗೌರ್ವನ್ಸ್ ಸರ್ವಿಸ್ ಲಿಮಿಟೆಡ್ (ಎನ್ಇಎಸ್ಎಲ್) ಎಂಬ ಅರೆ ಸರ್ಕಾರಿ ನೋಂದಾಯಿತ ಸಂಸ್ಥೆ ಪರಿಶೀಲನೆ ನಡೆಸುತ್ತದೆ.

ಪರಿಶೀಲನೆಯ ವೇಳೆ 168,13,23,994 ರೂ. ಸಾಲ ಪಡೆಯಲು 11 ವ್ಯಕ್ತಿಗಳು ನೀಡಿರುವ ಬ್ಯಾಂಕ್ ಗ್ಯಾರಂಟಿ ನಕಲಿ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎನ್ಇಎಸ್ಎಲ್ ಅಧಿಕಾರಿ ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು 11 ವ್ಯಕ್ತಿಗಳು ನೀಡಿದ ದಾಖಲಾತಿಗಳು, ಮೊಬೈಲ್ ನಂಬರುಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದಾರೆ.ಇಬ್ಬರು ವ್ಯಕ್ತಿಗಳು ಐಸಿಐಸಿಐ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಹೆಸರಿನಲ್ಲಿ ನೀಡಲಾಗಿದೆ ಎಂದು ಹೇಳಲಾದ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ 11 ಜನರ ಸಾಲಕ್ಕೆ ಖಾತ್ರಿಯನ್ನಾಗಿ ಒದಗಿಸಿದ್ದಾರೆ. ಇ-ಬ್ಯಾಂಕ್ ಗ್ಯಾರಂಟಿ ಸೇವೆ ನೀಡಲು ಸಾಲ ಪಡೆದವರಿಂದ ಆರೋಪಿಗಳು 5 ಕೋಟಿ ರೂ.ಗಳ ಕಮಿಷನ್ ಪಡೆದಿರುವುದು ಪತ್ತೆಯಾಗಿದೆ.

ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ನವದೆಹಲಿ, ಉತ್ತರ ಪ್ರದೇಶದ ನೊಯಿಡಾ ಸೇರಿದಂತೆ ಹಲವು ಕಡೆ ವಿಚಾರಣೆ ನಡೆಸಿದ್ದಾರೆ. ಒಬ್ಬ ಆರೋಪಿ ಕುವೈತ್ನಲ್ಲಿರುವುದು ದೃಢಪಟ್ಟಿತ್ತು. ಕೇಂದ್ರ ಗೃಹಸಚಿವಾಲಯದ ಸಹಕಾರದಲ್ಲಿ ಲುಕ್ ಔಟ್ ಸಕ್ರ್ಯೂಲರ್ ಹೊರಡಿಸಿ ಸದರಿ ಆರೋಪಿಯನ್ನು ಇತ್ತೀಚೆಗೆ ಕುವೈತ್ನಿಂದ ಹಸ್ತಾಂತರ ಪಡೆದುಕೊಂಡು ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳ ಸಹಾಯದಿಂದ ಉತ್ತರ ಪ್ರದೇಶದ ನೊಯಿಡಾ ನಿವಾಸಿ ಆಸಿಸ್ ಸಕ್ಸೇನಾ (45) ಎಂಬಾತನನ್ನು ಬಂಧಿಸಲಾಗಿದೆ.

ಬಂಧಿತನಿಂದ ಕೃತ್ಯಕ್ಕೆ ಬಳಸುತ್ತಿದ್ದ 2 ಲ್ಯಾಪ್ಟಾಪ್ಗಳು, 6 ವಿವಿಧ ಕಂಪನಿಯ ಮೊಬೈಲ್ ಫೋನ್ಗಳು, 1 ಪೆನ್ಡ್ರೈವ್, 10 ವಿವಿಧ ಬ್ಯಾಂಕ್ಗಳ ಚೆಕ್ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಖತರ್ನಾಕ್ ಆರೋಪಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿದ್ದು, ನೊಂದ ವ್ಯಕ್ತಿಗಳ ದೂರು ಆಧರಿಸಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಗುಜರಾತ್, ದೆಹಲಿಯಲ್ಲಿಯೂ ಆರೋಪಿಗಳು ಬ್ಯಾಂಕ್ ಸಾಲದ ಖಾತ್ರಿ ಹೆಸರಿನಲ್ಲಿ ದಂಧೆ ನಡೆಸುವುದು ಕಂಡುಬಂದಿದೆ.ಅಂತಾರಾಜ್ಯ ಮಟ್ಟದ ಈ ಹಗರಣದ ಬೆನ್ನತ್ತಿರುವ ಪೊಲೀಸರು ಬ್ಯಾಂಕ್ ಖಾತೆಗಳಿಗೆ ಮೂರನೇ ವ್ಯಕ್ತ ಸೇವೆ ಪಡೆಯುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

RELATED ARTICLES

Latest News