Sunday, April 28, 2024
Homeರಾಜ್ಯBIG NEWS : ಮತ್ತೆ ಮುರುಘಾ ಶ್ರೀ ಬಂಧನ?

BIG NEWS : ಮತ್ತೆ ಮುರುಘಾ ಶ್ರೀ ಬಂಧನ?

ಚಿತ್ರದುರ್ಗ, ನ.20- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣಾೀಧಿನವಾಗಿದ್ದು, ಒಂದನೇ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದ ಚಿತ್ರದುರ್ಗದ ಶಿವಮೂರ್ತಿ ಮುರುಘಾರಾಜೇಂದ್ರ ಶರಣರಿಗೆ ಎರಡನೇ ಪ್ರಕರಣ ಮುಳುವಾಗಿದ್ದು ಬಂಧನದ ಭೀತಿ ಎದುರಾಗಿದೆ.

ಚಿತ್ರದುರ್ಗದಲ್ಲಿನ ಮಠದಲ್ಲಿದ್ದಾಗ ಅಲ್ಲಿನ ವಸತಿ ಶಾಲೆಗಳಲ್ಲಿರುವ ಬಾಲಕೀಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪಗಳಿದ್ದವು. ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದ ಮೇಲೆ ಫೋಕ್ಸೋ ಸೇರಿದಂತೆ ವಿವಿಧ ಸೆಕ್ಸನ್‍ಗಳ ಅಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಶರಣರನ್ನು ಬಂಧಿಸಿದ್ದರು, ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಶಿವಮೂರ್ತಿ ಶರಣರು ನವೆಂಬರ್ 16ರಂದು ಮೊದಲ ಪ್ರಕರಣದಲ್ಲಿ ಜಾಮೀನು ಪಡೆದ್ದರು. ಎರಡನೇ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿ ಇರುವುದರಿಂದ ಶರಣರು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಧಿಶರಾದ ಕೋಮಲ ಅವರು ಸೂಚನೆ ನೀಡಿದ್ದರು.

ನ.16ರಂದು ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗಿದ್ದ ಶರಣರು 11.45ಕ್ಕೆ ಜೈಲಿನಿಂದ ಬಿಡುಗಡೆಯಾಗಿದ್ದರು. ಇದನ್ನು ಪ್ರಶ್ನಿಸಿ ದೂರುದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡನೇ ಪ್ರಕರಣದಲ್ಲಿ ಜಾಮೀನು ದೊರೆಯದೇ ಇರುವ ಕಾರಣ ಆರೋಪಿಯನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ, ಕೂಡಲೇ ಬಂಧನಾದೇಶ ನೀಡಬೇಕು ಎಂದು ಸರ್ಕಾರದ ಅಭಿಯೋಜಕರಾದ ಜಗದೀಶ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ನ್ಯಾಯಾಲಯದ ಆದೇಶದ ಹೊರತಾಗಿಯೂ ಆರೋಪಿಯನ್ನು ಬಿಡುಗಡೆ ಮಾಡಿದ ಬಗ್ಗೆ ಜೈಲಿನ ಅಧಿಕಾರಿಗಳನ್ನು ನ್ಯಾಯಾೀಧಿಶರು ಪ್ರಶ್ನೆ ಮಾಡಿದ್ದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಂದ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಈ ನಡುವೆ ಸರ್ಕಾರಿ ಅಭಿಯೋಜಕರ ವಾದವನ್ನು ಪರಿಗಣಿಸಿದ ಜಿಲ್ಲಾ ನ್ಯಾಯಾಲಯ ಬಂಧನಾದೇಶ ಜಾರಿ ಮಾಡಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುದ್ದುರಾಜ ವಾರೆಂಟ್‍ನೊಂದಿಗೆ ದಾವಣಗೆರೆಯ ವಿರಕ್ತಮಠಕ್ಕೆ ಭೇಟಿ ನೀಡಿದ್ದಾರೆ.

ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಶರಣರಿಗೆ ಚಿತ್ರದುರ್ಗದ ಮಠಕ್ಕೆ ಭೇಟಿ ನೀಡಬಾರದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆ ಕಾರಣಕ್ಕೆ ಶರಣರು ದಾವಣಗೆರೆಯ ವಿರಕ್ತ ಮಠದಲ್ಲಿದ್ದಾರೆ.

ಮೊದಲ ಪ್ರಕರಣದಲ್ಲಿ ಜಾಮೀನು ದೊರೆತ ಕಾರಣಕ್ಕೆ ಜೈಲಿನಿಂದ ಶರಣರನ್ನು ಬಿಡುಗಡೆ ಮಾಡಿದ್ದಕ್ಕೆ ಹಲವು ರೀತಿಯ ವ್ಯಾಖ್ಯಾನಗಳು ಕೇಳಿ ಬಂದಿವೆ. ಒಂದೇ ಮಾದರಿಯ ಮೊದಲ ಪ್ರಕರಣದಲ್ಲಿ ಜಾಮೀನು ದೊರೆತ ಕಾರಣಕ್ಕೆ ಎರಡನೇ ಪ್ರಕರಣಕ್ಕೂ ಅದು ಅನ್ವಯಗೊಳ್ಳುತ್ತದೆ ಎಂದು ಅಧಿಕಾರಿಗಳು ಅರ್ಥೈಸಿಕೊಂಡು ಬಿಡುಗಡೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮೊದಲ ಪ್ರಕರಣದಲ್ಲಿ ಶರಣರನ್ನು ಬಂಧಿಸಲಾಗಿತ್ತು. ಎರಡನೇ ಪ್ರಕರಣದಲ್ಲಿ ಶರಣರನ್ನು ಬಂಧಿಸಿರಲಿಲ್ಲ. ಬದಲಾಗಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಶ್ರೀಗಳನ್ನು ಬಾಡಿ ವಾರೆಂಟ್ ಮೇಲೆ ವಿಚಾರಣೆ ನಡೆಸಿದ್ದರು. ಬಂಧನವಾಗದೆ ಇರುವುದರಿಂದ ಜಾಮೀನಿನ ಅಗತ್ಯ ಇಲ್ಲ ಎಂಬ ವಾದಗಳಿದ್ದವು. ಒಂದು ವರ್ಷ ಎರಡು ತಿಂಗಳ ಬಳಿಕ ಎರಡನೇ ಪ್ರಕರಣದಲ್ಲಿ ಈಗ ಬಂಧಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗಳು ಕೇಳಿ ಬಂದಿವೆ. ಮೊದಲನೇ ಪ್ರಕರಣದಲ್ಲಿ ಬಂಧನವಾಗಿದ್ದರಿಂದ ಜಾಮೀನು ಪಡೆಯಬೇಕು, ಎರಡನೇ ಪ್ರಕರಣದಲ್ಲಿ ಬಂಧನವಾಗದೆ ಬಾಡಿ ವಾರೆಂಟ್ ಮೇಲಷ್ಟೆ ವಿಚಾರಣೆಯಾಗಿದ್ದರಿಂದ ಜಾಮೀನು ಪಡೆಯುವ ಅಗತ್ಯ ಇಲ್ಲ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು. ಅದನ್ನು ಬಳಸಿಕೊಂಡು ಶರಣರ ಪರ ವಕೀಲರು ವಾದ ಮಂಡಿಸಿದ್ದರು.

ದೂರುದಾರರ ಪರ ವಕೀಲರು ಇದಕ್ಕೆ ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದು, ಎಲ್ಲಾ ಪ್ರಕರಣಗಳು ಪ್ರತ್ಯೇಕವಾದ ಜಾಮೀನು ಪಡೆದುಕೊಳ್ಳುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಎರಡನೇ ಪ್ರಕರಣದಲ್ಲಿ ಜಾಮೀನು ಪಡೆಯದೆ ಹೊರಗೆ ಇದ್ದಾಗ ಮರು ಬಂಧನಕ್ಕೆ ಆದೇಶಿಸಿದ ಕೇರಳ ಪ್ರಕರಣವನ್ನು ವಕೀಲರು ಉಲ್ಲೇಖಿಸಿದ್ದರು.

ಕಂದಾಯ ಇಲಾಖೆಯನ್ನು ಜನ ಸ್ನೇಹಿ ಮಾಡಲು ಹಲವು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಶರಣರ ಪರ ವಕೀಲರಾದ ಉಮೇಶ್, ಶ್ರೀಗಳು ಕಾನೂನಿಗೆ ತಲೆ ಬಾಗಿದ್ದಾರೆ. ಷರತ್ತಿನ ಅನ್ವಯ ಚಿತ್ರದುರ್ಗ ಮಠಕ್ಕೆ ಭೇಟಿ ನೀಡದೆ ದೂರ ಉಳಿದಿದ್ದಾರೆ. ಅದರ ಹೊರತಾಗಿಯೂ ದುರುದ್ದೇಶ ಪೂರ್ವಕವಾಗಿ ಮರು ಬಂಧನಕ್ಕೆ ಮನವಿ ಮಾಡಲಾಗುತ್ತಿದೆ.

ಈಗಾಗಲೇ ಜಾಮೀನು ದೊರೆತಿರುವುದರಿಂದ ಮತ್ತೆ ಬಂಧನದ ಅಗತ್ಯ ಇಲ್ಲ ಎಂದು ವಾದಿಸಿದ್ದರು. ಆದರೆ ದೂರುದಾರರ ಪರ ವಾದವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಜಿಲ್ಲಾ ನ್ಯಾಯಾಲಯ ವಾರೆಂಟ್ ಜಾರಿ ಮಾಡುತ್ತಿದ್ದಂತೆ ಶರಣರ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ.

RELATED ARTICLES

Latest News