Homeರಾಜ್ಯಅನುದಾನ ಬಿಡುಗಡೆಯಾಗದೆ ಆರ್ಥಿಕ ಬಿಕ್ಕಟ್ಟು : ಡೆತ್‌ನೋಟ್‌‍ ಮಾದರಿ ಪತ್ರ ಬರೆದಿಟ್ಟು AEE ನಾಪತ್ತೆ..!

ಅನುದಾನ ಬಿಡುಗಡೆಯಾಗದೆ ಆರ್ಥಿಕ ಬಿಕ್ಕಟ್ಟು : ಡೆತ್‌ನೋಟ್‌‍ ಮಾದರಿ ಪತ್ರ ಬರೆದಿಟ್ಟು AEE ನಾಪತ್ತೆ..!

ಬೆಂಗಳೂರು, ಸೆ.26- ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ. ಅಭಿವೃದ್ಧಿ ಅನುದಾನ ಬಿಡುಗಡೆಯಾಗದೆ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಗುತ್ತಿಗೆದಾರರ ಸಾಲದ ಒತ್ತಡಕ್ಕೆ ಸಿಲುಕಿ, ಗದಗ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಫರ್ವೀಜ್‌ ಎಂಬುವರು ಡೆತ್‌ನೋಟ್‌‍ ಮಾದರಿಯ ಪತ್ರ ಬರೆದು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಬ್‌‍-ಗುತ್ತಿಗೆದಾರರು ಪ್ರತಿದಿನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದು, ದೂರವಾಣಿ ಕರೆಗಳ ಮೂಲಕ ತೀವ್ರ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡದಿರುವು ದರಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಫರ್ವೀಜ್‌ ಬೆಂಗಳೂರಿನ ಕೆಆರ್‌ಐಡಿಎಲ್‌‍ ಕಾರ್ಯಪಾಲಕ ಎಂಜಿನಿಯರ್‌ಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬಾಕಿ ಹಣ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಬ್‌ಗುತ್ತಿಗೆದಾರರು ಮನೆಯ ಬಳಿಗೆ ಬಂದು ಗಲಾಟೆ ಮಾಡುತ್ತಿದ್ದರು ಹಾಗೂ ನಿರಂತರವಾಗಿ ದೂರವಾಣಿ ಕರೆಗಳ ಮೂಲಕ ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಈ ಬೆಳವಣಿಗೆಗಳು ತಮ ಮಾನಸಿಕ ಸ್ಥಿತಿಯ ಮೇಲೂ ತೀವ್ರ ಪರಿಣಾಮ ಬೀರಿವೆ ಎಂದು ಫರ್ವೀಜ್‌ ಪತ್ರದಲ್ಲಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ, ತಮ ಉಪವಿಭಾಗಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಬೇಕು, ತಮ ಬದಲಿಗೆ ಬೇರೆ ಎಇಇಯನ್ನು ನಿಯೋಜಿಸಬೇಕು ಹಾಗೂ ತಮ ಕುಟುಂಬದವರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪತ್ರದಲ್ಲಿನ ಕೆಲವು ಅಂಶಗಳು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತಾವು ಸೋತಿರುವುದಾಗಿ ಹಾಗೂ ತಮ ಜೀವನವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಆದರೆ ಪತ್ರ ಬರೆದ ಬಳಿಕ ಫರ್ವೀಜ್‌ ಅವರ ನಿಖರವಾದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಅವರು ಎಲ್ಲಿದ್ದಾರೆ, ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಇದೀಗ ಪೊಲೀಸರ ತನಿಖೆಯ ಪ್ರಮುಖ ಅಂಶವಾಗಿದೆ.ಸೆಪ್ಟೆಂಬರ್‌ 13ರಂದು ಬೆಂಗಳೂರಿನ ಸಭೆಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಫರ್ವೀಜ್‌ ಬಳಿಕ ವಾಪಸ್‌‍ ಬಂದಿರಲಿಲ್ಲ. ಸೆಪ್ಟೆಂಬರ್‌ 16ರಂದು ಅವರು ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಗದಗ-ಬೆಟಗೇರಿ ಬಡಾವಣೆ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪತ್ನಿ, ಪುತ್ರಿ, ತಂದೆ-ತಾಯಿ ಹಾಗೂ ಸಹೋದರರನ್ನು ಬಿಟ್ಟುಹೋಗಿ ಫರ್ವೀಜ್‌ ಅವರ ಕುಟುಂಬ ಆತಂಕಕ್ಕೆ ಒಳಗಾಗಿದೆ. ಅವರನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಫರ್ವೀಜ್‌ ಅವರ ಮೊಬೈಲ್‌ ಫೋನ್‌, ಪ್ರಯಾಣದ ವಿವರಗಳು, ಅವರು ಕೊನೆಯದಾಗಿ ಸಂಪರ್ಕಿಸಿದ್ದ ವ್ಯಕ್ತಿಗಳು ಹಾಗೂ ಬೆಂಗಳೂರಿಗೆ ತೆರಳಿದ ಹಿನ್ನೆಲೆಯ ಮಾಹಿತಿಗಳನ್ನು ಪರಿಶೀಲಿಸುತ್ತಿರುವ ಸಾಧ್ಯತೆ ಇದೆ. ಅವರನ್ನು ಪತ್ತೆಹಚ್ಚಲು ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES
spot_img

Latest News