ಬೆಂಗಳೂರು, ಫೆ.14- ನಾಯಕತ್ವದ ಬದಲಾವಣೆಯ ಬಗ್ಗೆ ಹೈಕಮಾಂಡ್ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ. ರಾಜ್ಯದ ನಾಯಕರು ನೀಡುವ ಹೇಳಿಕೆಗಳಿಗೆಲ್ಲಾ ಉತ್ತರ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವದ್ಧಂತಿಗಳನ್ನು ತಳ್ಳಿ ಹಾಕಿದ್ದಾರೆ.
ಹಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಯಕತ್ವ ವಿಚಾರಕ್ಕೆ ಸಂಬಂಧಪಟ್ಟಂತೆ ಪದೇ ಪದೇ ಪ್ರಶ್ನೆ ಕೇಳಬೇಡಿ ಅದಕ್ಕೆ ನಾನು ಉತ್ತರ ನೀಡುವುದಿಲ್ಲ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ರಮಕ್ಕೆ ತಕ್ಕ ಫಲ ಸಿಗುತದೆ ಎಂದು ಹೇಳಿರುವುದಕ್ಕೆ ಹಾಗೂ ಐದು ವರ್ಷ ಕಾಲ ತಮ ತಂದೆಯವರೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿರುವುದಕ್ಕೆ ಸಂಬಂಧಪಟ್ಟಂತೆ ಪದೇ ಪದೇ ಪ್ರಶ್ನೆಗಳು ಎದುರಾದಾಗ ಸಿದ್ದರಾಮಯ್ಯ ಸಿಡಿಮಿಡಿಯಾದರು.
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ರಾಜ್ಯದ ಎಲ್ಲಾ ನಾಯಕರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು ಎಂದರು.
ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಯಾರು ಏನು ಹೇಳಿದ್ದಾರೆ ಎಂಬುದು ಮುಖ್ಯ ಅಲ್ಲ. ಹೈಕಮಾಂಡ್ ನಾಯಕರು ಏನಾದರೂ ಹೇಳಿದ್ದಾರೆಯೇ ? ಹೇಳಿಲ್ಲ ಎಂದಾದ ಮೇಲೆ ಅದನ್ನು ಬಿಟ್ಟು ಬಿಡಿ. ಸ್ಥಳೀಯ ನಾಯಕರು ನೀಡಿರುವ ಹೇಳಿಕೆಗಳಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದರು. ಅಧಿಕಾರ ಹಂಚಿಕೆ ಸಂಬಂಧಪಟ್ಟಂತೆ ಮಾತುಕತೆಗಾಗಿ ಹೈಕಮಾಂಡ್ ತಮಗೆ ಆಹ್ವಾನ ನೀಡಿದರೆ, ನಾನು ದೆಹಲಿಗೆ ಹೋಗುತ್ತೇನೆ. ಆದರೆ ಯಾವ ದಿನದಂದು ಕರೆಯುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರಕ್ಕೆ ನೂರು ದಿನ ತುಂಬಿರುವುದಕ್ಕೆ ಹಾವೇರಿಯಲ್ಲಿಂದು ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಇದನ್ನು ಬಿಜೆಪಿಯವರು ಟೀಕಿಸುವುದು ಅರ್ಥಹೀನ. ನಾಲ್ಕು ವರ್ಷ ಅವರು ಅಧಿಕಾರ ನಡೆಸಿದ್ದರು. ಆಗ ಏನನ್ನು ಸಾಧನೆ ಮಾಡಲಿಲ್ಲ ಎಂದು ತಿರುಗೇಟು ನೀಡಿದರು. ನಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ನಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಂದಿನ ದಿನಗಳಲ್ಲೂ ಯೋಜನೆಗಳು ಮುಂದುವರಿಯಲಿವೆ. ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಅನಂತರ ಅಧಿಕಾರಕ್ಕೆ ಬಂದ ಬಿಜೆಪಿಯವರು ತಮ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿ, ಅದರಲ್ಲಿ ಶೇ.10ರಷ್ಟನ್ನು ಈಡೇರಿಸಲಿಲ್ಲ. ಪ್ರಸಕ್ತ ಎರಡುವರೆ ವರ್ಷದಲ್ಲಿ 592 ಭರವಸೆಗಳ ಪೈಕಿ 292ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು ಹೊಟ್ಟೆ ಕಿಚ್ಚಿನಿಂದ ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಚಾರಗಳಲ್ಲಿ ತಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಮತ್ತೆ ಮುನ್ನೆಲೆಗೆ ಬಂದ ಜಾತಿಗಣತಿ ವರದಿ:
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ಮೂರು ನಾಲ್ಕು ತಿಂಗಳ ಒಳಗಾಗಿ ಸಲ್ಲಿಸಲಿದ್ದಾರೆ. ಆನಂತರ ಸರ್ಕಾರ ಅದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ವರದಾ-ಬೆಡ್ತಿ ನದಿಗಳ ಜೋಡಣೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಕಡಿಮೆ ಇದೆ ಎಂದರು.
