ಆರ್ಲಿಂಗ್ಟನ್ (ಟೆಕ್ಸಾಸ್), ಜೂನ್ 18: ಕ್ರೊಯೇಷಿಯಾದ ಸ್ಟ್ರೈಕರ್ ಪೆಟರ್ ಮೂಸಾ ವಿಶ್ವಕಪ್‌ನಲ್ಲಿ ತಮ ಮೊದಲ ಗೋಲು ದಾಖಲಿಸಿದರೂ, ಅವರ ತಂಡ ಇಂಗ್ಲೆಂಡ್ ವಿರುದ್ಧ 4-2 ಅಂತರದ ಸೋಲು ಅನುಭವಿಸಿತು. ಪ್ರಸ್ತುತ ಎಫ್‌ಸಿ ಡಲ್ಲಾಸ್ ತಂಡದ ಪರ ಆಡುತ್ತಿರುವ ಮೂಸಾ, ಡಲ್ಲಾಸ್ ಪ್ರದೇಶದಲ್ಲಿ ಸಾಕಷ್ಟು ಗೋಲುಗಳನ್ನು ಗಳಿಸಿರುವ ಅನುಭವ ಹೊಂದಿದ್ದಾರೆ. ಇದೀಗ ಅವರು ಫುಟ್‌ಬಾಲ್‌ನ ಅತಿದೊಡ್ಡ ವೇದಿಕೆಯಾದ ವಿಶ್ವಕಪ್‌ನಲ್ಲೂ ಗೋಲು ದಾಖಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪಂದ್ಯದಲ್ಲಿ ಮೊದಲಾರ್ಧದ ಹೆಚ್ಚುವರಿ ಸಮಯದ ಕೊನೆಯ ಕ್ಷಣದಲ್ಲಿ ಮೂಸಾ ಸಮಬಲದ ಗೋಲು ಗಳಿಸಿದರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಯುರೋಪಿನ ತಂಡದ ಪರ ಗೋಲು ಗಳಿಸಿದ ಮೂರನೇ ಮೇಜರ್ ಲೀಗ್ ಸಾಕರ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯದ ಬಳಿಕ ಮಾತನಾಡಿದ ಮೂಸಾ, ತವರಿನಂತಿರುವ ಈ ಮೈದಾನದಲ್ಲಿ ಗೋಲು ಗಳಿಸಿದ್ದು ಅದ್ಭುತ ಅನುಭವ. ಆದರೆ ಪಂದ್ಯದಲ್ಲಿ ಸೋತಿರುವುದರಿಂದ ಸಂತೋಷವಿಲ್ಲ. ಸೋಲಿನ ಬಳಿಕ ಸಂಭ್ರಮಿಸಲು ಹೆಚ್ಚು ಏನೂ ಇಲ್ಲ ಎಂದು ಹೇಳಿದರು.
28 ವರ್ಷದ ಮೂಸಾ ಈ ಮೂಲಕ ಡಲ್ಲಾಸ್ ಪ್ರದೇಶದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗಳಿಸಿದ ಗೋಲುಗಳ ಸಂಖ್ಯೆಯನ್ನು 32ಕ್ಕೆ ಏರಿಸಿಕೊಂಡರು. ಈ ಋತುವಿನಲ್ಲಿ ನಲ್ಲಿ 12 ಗೋಲುಗಳೊಂದಿಗೆ ಅವರು ಲಿಯೋನೆಲ್ ಮೆಸ್ಸಿಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಲೀಗ್‌ನಲ್ಲಿ ಅವರ ಒಟ್ಟು ಗೋಲುಗಳ ಸಂಖ್ಯೆ 46ಕ್ಕೆ ತಲುಪಿದೆ. ಪಂದ್ಯದಲ್ಲಿ ಕ್ರೊಯೇಷಿಯಾ 2-1 ಹಿನ್ನಡೆಯಲ್ಲಿದ್ದಾಗ, ಮಾರಿಯೊ ಪಸಾಲಿಚ್ ನೀಡಿದ ಪಾಸ್ ಅನ್ನು ಇವಾನ್ ಪೆರಿಸಿಚ್ ಹೆಡರ್ ಮೂಲಕ ಮೂಸಾಗೆ ತಲುಪಿಸಿದರು. ಚೆಂಡು ನೆಲಕ್ಕೆ ಬೀಳುವ ಮುನ್ನವೇ ಮೂಸಾ ಅದನ್ನು ಗೋಲಾಗಿ ಪರಿವರ್ತಿಸಿ, ಇಂಗ್ಲೆಂಡ್ ಗೋಲ್‌ಕೀರ್ಪ ಜೋರ್ಡನ್ ಪಿಕ್‌ಫೋರ್ಡ್ ಅವರನ್ನು ಮಣಿಸಿದರು. ಗೋಲು ಆದ ತಕ್ಷಣವೇ ಮೊದಲಾರ್ಧದ ಅಂತ್ಯಕ್ಕೆ ಸೀಟಿ ಮೊಳಗಿತು.
ಆದರೆ ಎರಡನೇರ್ಧ ಆರಂಭವಾಗಿ ಕೇವಲ ಎರಡು ನಿಮಿಷಗಳಲ್ಲಿ ಜೂಡ್ ಬೆಲ್ಲಿಂಗ್ಹ್ಯಾಮ್ ಇಂಗ್ಲೆಂಡ್‌ಗೆ ಮುನ್ನಡೆ ತಂದುಕೊಡುವ ಗೋಲುಗಳಿಸಿದರು. ಬಳಿಕ 66ನೇ ನಿಮಿಷದಲ್ಲಿ ಕ್ರೊಯೇಷಿಯಾ ಕೋಚ್ ಝ್ಲಾಟ್ಕೊ ಡಾಲಿಕ್ ಅವರು ಮೂಸಾ ಬದಲಿಗೆ ಇಗೋರ್ ಮತಾನೋವಿಚ್ ಅವರನ್ನು ಕಣಕ್ಕಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮೂಸಾ, ಕೋಚ್ ಅವರೇ ಮುಖ್ಯಸ್ಥರು. ನಿರ್ಧಾರ ಅವರದ್ದು. ಸಾಕಷ್ಟು ಓಡಿದ್ದರಿಂದ ನಾನು ಆಯಾಸಗೊಂಡಿದ್ದೆಎಂದರು. ಇಂಗ್ಲೆಂಡ್ ಭರ್ಜರಿ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಮೇಲೇರಿದೆ.
