ಬೆಂಗಳೂರು, ಜೂ.3- ಒಂದು ಕಿ.ಮೀ ದೂರಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಎಂಬ ಜಿಬಿಎ ಸಲಹೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ 1 ಕಿಲೋಮೀಟರ್ ಚಾಲೆಂಜ್ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ಕಿಲೋ ಮೀಟರ್‌ವರೆಗೆ ಇರುವ ದೂರವನ್ನು ವಾಹನ ಬಳಸದೆ ಕಾಲ್ನಡಿಗೆಯಲ್ಲೇ ಕ್ರಮಿಸಿ ಎಂದು ನೀಡಿದ್ದ ಸಲಹೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
1 ಕಿಲೋಮೀಟರ್ ವರೆಗಿನ ದೂರವನ್ನು ನಡೆಯುತ್ತಲೇ ಕ್ರಮಿಸಿ, ಪಾದಚಾರಿ ಮಾರ್ಗಗಳನ್ನು ಬಳಸಿ, ಪರಿಸರ ಸ್ನೇಹಿಯಾಗಿ ಎಂಬ ಸಂದೇಶದೊಂದಿಗೆ ಪೋಸ್ಟ್ ಮಾಡಿತ್ತು. ಆದರೆ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೊದಲು ನಡೆಯಲು ಯೋಗ್ಯವಾದ ಫುಟ್‌ಪಾತ್ ನಿರ್ಮಿಸಿ, ನಂತರ ಇಂತಹ ಚಾಲೆಂಜ್ ನೀಡಿ ಎಂದು ತಿರುಗೇಟು ನೀಡಿದ್ದಾರೆ.
ನಗರದ ಬಹುತೇಕ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳ ಸ್ಥಿತಿ ದಯನೀಯವಾಗಿದೆ. ಹಲವೆಡೆ ಫುಟ್‌ಪಾತ್‌ಗಳು ಒಡೆದು ಹೋಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ವ್ಯಾಪಾರಿಗಳು, ವಾಹನಗಳು ಹಾಗೂ ವಿವಿಧ ಅತಿಕ್ರಮಣಗಳಿಂದ ಪಾದಚಾರಿಗಳಿಗೆ ನಡೆಯಲು ಜಾಗವೇ ಇಲ್ಲದಂತಾಗಿದೆ. ಕೆಲವೆಡೆ ಚರಂಡಿ ಮುಚ್ಚಳಗಳಿಲ್ಲದಿರುವುದು, ಗುಂಡಿಗಳು ಹಾಗೂ ಅಸಮತೋಲನದ ಮೇಲ್ಮೈಗಳಿಂದ ಪಾದಚಾರಿಗಳ ಸುರಕ್ಷತೆ ಪ್ರಶ್ನಾರ್ಥಕವಾಗಿದೆ ಎಂದು ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಲ್ಲಿ ನೆಟ್ಟಗೆ 100 ಮೀಟರ್ ಕೂಡ ಅಡೆತಡೆಗಳಿಲ್ಲದ ಫುಟ್‌ಪಾತ್ ಸಿಗುವುದು ಕಷ್ಟ. ಒಂದು ಕಿಲೋಮೀಟರ್ ನಡೆಯಿರಿ ಎನ್ನುವುದು ವಾಸ್ತವಕ್ಕೆ ದೂರವಾದ ಸಲಹೆ ಎಂದು ಕಿಡಿಕಾರಿದ್ದಾರೆ. ಫುಟ್‌ಪಾತ್ ಮೇಲೆ ಕಾಲಿಟ್ಟರೆ ಜೀವಕ್ಕೆ ಗ್ಯಾರಂಟಿ ಇಲ್ಲದ ಪರಿಸ್ಥಿತಿ ಇದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಕೆಲವೆಡೆ ಫುಟ್‌ಪಾತ್ ಸಂಪೂರ್ಣವಾಗಿ ಒಡೆದು ಹೋಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಮರಗಳ ಬೇರುಗಳು, ವಿದ್ಯುತ್ ಕಂಬಗಳು ಹಾಗೂ ವಿವಿಧ ಅಡ್ಡಿಗಳಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆಯುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.ಪಾದಚಾರಿ ಸ್ನೇಹಿ ನಗರ ನಿರ್ಮಾಣದ ಬಗ್ಗೆ ಮಾತುಗಳಿಗಿಂತ ಮೊದಲು ಸುರಕ್ಷಿತ, ನಿರಂತರ ಮತ್ತು ಗುಣಮಟ್ಟದ ಫುಟ್‌ಪಾತ್‌ಗಳನ್ನು ಒದಗಿಸುವುದು ಅಗತ್ಯ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ಇಂತಹ ಜಾಗೃತಿ ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹಾಗೂ ಟೀಕೆಗೆ ಮಾತ್ರ ಆಹಾರವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಒಟ್ಟಾರೆ, ಪರಿಸರ ಕಾಳಜಿಯ ಸಂದೇಶ ನೀಡಲು ಹೋಗಿದ್ದ , ನಗರದ ನೆಲದ ವಾಸ್ತವವನ್ನು ಮರೆತು ಪೋಸ್ಟ್ ಹಾಕಿದ ಕಾರಣ ಇದೀಗ ಸಾರ್ವಜನಿಕರ ಛೀಮಾರಿಗೆ ಗುರಿಯಾಗಿದೆ. ಮೊದಲು ಫುಟ್‌ಪಾತ್ ಸರಿಪಡಿಸಿ, ನಂತರ ಚಾಲೆಂಜ್ ಕೊಡಿ ಎಂಬುದು ಬಹುತೇಕ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.
