Homeರಾಷ್ಟ್ರೀಯಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಗಾಜಿಪುರದಲ್ಲಿ ಇಬ್ಬರು ಬಾಲಕಿಯರು ನಾಪತ್ತೆ; ವಾರಾಣಸಿಯಲ್ಲಿ ಪ್ರವಾಹ

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಗಾಜಿಪುರದಲ್ಲಿ ಇಬ್ಬರು ಬಾಲಕಿಯರು ನಾಪತ್ತೆ; ವಾರಾಣಸಿಯಲ್ಲಿ ಪ್ರವಾಹ

ಲಖನೌ, ಸೆ.1- ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ನದಿಗಳ ನೀರಿನ ಮಟ್ಟ ಏರಿಕೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೀತಾಪುರದಲ್ಲಿ ಮಣ್ಣಿನ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದು, ಗಾಜಿಪುರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ನೀರಿನಲ್ಲಿ ಕೊಚ್ಚಿಕೊಂಡು ನಾಪತ್ತೆಯಾಗಿದ್ದಾರೆ. ಬಲ್ಲಿಯಾದಲ್ಲಿ ಸುಮಾರು 20 ಸಾವಿರ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಚಿತ್ರಕೂಟದಲ್ಲಿ ಮಂದಾಕಿನಿ ನದಿ ಅಪಾಯದ ಮಟ್ಟಕ್ಕಿಂತ ನಾಲ್ಕು ಮೀಟರ್‌ಗೂ ಅಧಿಕ ಎತ್ತರದಲ್ಲಿ ಹರಿಯುತ್ತಿದೆ.

ವಾರಾಣಸಿಯಲ್ಲಿ ಗಂಗಾ ನದಿ ಎಚ್ಚರಿಕೆಯ ಮಟ್ಟವನ್ನು ದಾಟಿದ್ದು, ಹಲವು ಪ್ರದೇಶಗಳ ರಸ್ತೆಗಳು ಹಾಗೂ ಗಲ್ಲಿಗಳಿಗೆ ನೀರು ನುಗ್ಗಿದೆ. ಪರಿಣಾಮ ಕೆಲವು ಪ್ರದೇಶಗಳಲ್ಲಿ ದೋಣಿಗಳ ಮೂಲಕ ಜನರ ಸಂಚಾರ ನಡೆಸಲಾಗುತ್ತಿದೆ. ಪ್ರವಾಹದಿಂದ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಶವಸಂಸ್ಕಾರವನ್ನು ಮೇಲ್ಛಾವಣಿ ಹಾಗೂ ಪರ್ಯಾಯ ಸ್ಥಳಗಳಲ್ಲಿ ನಡೆಸಲಾಗುತ್ತಿದೆ.
ಸೀತಾಪುರದ ಕಮಲಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗೌರಾ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು 32 ವರ್ಷದ ನೇಕರಾಮ್‌ ಹಾಗೂ ಅವರ ಐದು ವರ್ಷದ ಸೊಸೆ ಲಕ್ಷ್ಮೀ ಮೃತಪಟ್ಟಿದ್ದಾರೆ. ಎಂಟು ವರ್ಷದ ಮೋಹಿತ್‌ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರ ಮಳೆಯಿಂದ ಗೋಡೆ ದುರ್ಬಲಗೊಂಡಿದ್ದು, ಮನೆಯೊಳಗಿದ್ದಾಗಲೇ ಏಕಾಏಕಿ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಜಿಪುರದ ಕರಂಡಾ ಪ್ರದೇಶದ ಚೋಚಕ್‌ಪುರ ಘಾಟ್‌ನಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ 16 ವರ್ಷದ ಮಾಹಿ ಸಿಂಗ್‌ ಹಾಗೂ 14 ವರ್ಷದ ಮಹಿಮಾ ಸಿಂಗ್‌ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಪೊಲೀಸರು, ಆಡಳಿತ ಸಿಬ್ಬಂದಿ ಹಾಗೂ ಸ್ಥಳೀಯ ದೋಣಿಗಾರರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ವರದಿ ಸಲ್ಲಿಸುವ ವೇಳೆಗೆ ಬಾಲಕಿಯರ ಪತ್ತೆಯಾಗಿರಲಿಲ್ಲ.

ಪರಿಹಾರ ಹಾಗೂ ಜನರ ಸ್ಥಳಾಂತರಕ್ಕಾಗಿ 47 ದೋಣಿಗಳನ್ನು ನಿಯೋಜಿಸಲಾಗಿದೆ. ಗಂಗಾ ನದಿ ಅಪಾಯದ ಮಟ್ಟಕ್ಕಿಂತ 1.60 ಮೀಟರ್‌ ಎತ್ತರದಲ್ಲಿ ಹರಿಯುತ್ತಿದ್ದು, ರಾತ್ರಿಯಿಂದ ಬಾರಿ ಮಳೆಯಾಗುತ್ತಿದ್ದು,ಬಾದಿತ ಜನರಿಗೆ ಅಧಿಕಾರಿಗಳು 6,110 ಪಡಿತರ ಕಿಟ್‌ಗಳು, 33,411 ಔಷಧ ಕಿಟ್‌ಗಳು ಹಾಗೂ 81,300 ಪ್ಯಾಕೆಟ್‌ಗಳಷ್ಟು ಸಿದ್ಧ ಆಹಾರವನ್ನು ವಿತರಿಸಿದ್ದಾರೆ. ಗೋಪಾಲನಗರ ತಾಡಿ ಮತ್ತು ಭೋಜ್‌ಪುರವಾ ಪ್ರದೇಶಗಳಲ್ಲಿ ಪ್ರವಾಹ ಪರಿಹಾರ ಕೇಂದ್ರಗಳು ಹಾಗೂ ಸಮುದಾಯ ಅಡುಗೆಮನೆಗಳನ್ನು ತೆರೆಯಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಪಿಎಸಿ ತಂಡಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿವೆ.

ವಾರಾಣಸಿಯಲ್ಲಿ ಕೇಂದ್ರ ಜಲ ಆಯೋಗದ ಪ್ರಕಾರ ಬೆಳಗ್ಗೆ 10 ಗಂಟೆಗೆ ಗಂಗಾ ನದಿ 70.28 ಮೀಟರ್‌ ಮಟ್ಟದಲ್ಲಿ ಹರಿಯುತ್ತಿತ್ತು. ಇದು 70.26 ಮೀಟರ್‌ನ ಎಚ್ಚರಿಕೆ ಮಟ್ಟಕ್ಕಿಂತ ಮೇಲಿದ್ದರೂ, 71.262 ಮೀಟರ್‌ನ ಅಪಾಯದ ಮಟ್ಟಕ್ಕಿಂತ ಕೆಳಗಿತ್ತು. ನದಿಯ ನೀರಿನ ಮಟ್ಟ ಗಂಟೆಗೆ ಸುಮಾರು 0.5 ಸೆಂ.ಮೀ. ವೇಗದಲ್ಲಿ ಏರುತ್ತಿತ್ತು. ವರಾ ನದಿ ತೀರದ ಹಲವು ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಶಾರದಾ ನದಿಯ ನೀರಿನ ಮಟ್ಟ ಏರಿಕೆಯಿಂದ ಭೀರಾ ಮತ್ತು ಪಲಿಯಾ ನಿಲ್ದಾಣಗಳ ನಡುವಿನ ಹಳಿಗಳಿಗೆ ನೀರು ನುಗ್ಗಿ ಮೈಲಾನಿ-ನನಪಾರಾ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಮುಂದಿನ ಆದೇಶದವರೆಗೆ ಮೈಲಾನಿ, ಬಿಚಿಯಾ ಮತ್ತು ನನಪಾರಾ ನಡುವಿನ ರೈಲು ಸೇವೆ ಸ್ಥಗಿತಗೊಳ್ಳಲಿದೆ ಎಂದು ಉತ್ತರ ಪೂರ್ವ ರೈಲ್ವೆ ತಿಳಿಸಿದೆ. ನೇಪಾಳ ಗಡಿ ಪ್ರದೇಶದಲ್ಲೂ ಮೋಹನಾ ಮತ್ತು ಕರ್ಣಾಲಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಟಿಕುನಿಯಾ ಸೇರಿದಂತೆ ಗಡಿ ಗ್ರಾಮಗಳಿಗೆ ಆತಂಕ ಎದುರಾಗಿದೆ. ದುಧ್ವಾ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಅಧಿಕಾರಿಗಳು ನಿಗಾ ಇರಿಸಿದ್ದಾರೆ.

RELATED ARTICLES
spot_img

Latest News