ನವದೆಹಲಿ, ಸೆ.1- ವಿಶ್ವದಾದ್ಯಂತ ಯುದ್ಧ, ಸಂಘರ್ಷ, ಅಸ್ಥಿರತೆ ಹಾಗೂ ಪೂರೈಕೆ ಸರಪಳಿ ವ್ಯತ್ಯಯಗಳ ನಡುವೆಯೂ ಭಾರತ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿರುವುದು ದೇಶದ ಜನರ ಸಾಮೂಹಿಕ ಸಂಕಲ್ಪ ಮತ್ತು ಶ್ರಮದ ಫಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಜಾಲ ತಾಣ ಇನ್ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಜನರನ್ನು ಅಭಿನಂದಿಸಿದ ಪ್ರಧಾನಿ, ಸ್ವದೇಶಿ ಮತ್ತು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದರೆ ಸ್ವಾತಂತ್ರ್ಯದ 100ನೇ ವರ್ಷದಲ್ಲಿ ದೇಶದ ಯುವಜನತೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಿದ್ದಕ್ಕಾಗಿ ದೇಶದ ಜನರನ್ನು ಅಭಿನಂದಿಸುತ್ತೇನೆ. ಇದು ಅವರ ಸಾಮೂಹಿಕ ಸಂಕಲ್ಪ ಮತ್ತು ಪ್ರಯತ್ನಗಳಿಂದ ಸಾಧ್ಯವಾಗಿದೆ. ಎಲ್ಲೆಡೆ ಸಂಘರ್ಷ, ಯುದ್ಧ ಮತ್ತು ಅಸ್ಥಿರತೆ ಇದ್ದರೂ ಭಾರತ ಈ ಸಾಧನೆ ಮಾಡಿದೆ ಎಂದು ಮೋದಿ ಹೇಳಿದರು. 2020ರ ಕೋವಿಡ್ ಮಹಾಮಾರಿಯ ನಂತರ ಜಗತ್ತಿನಲ್ಲಿ ಸ್ಥಿರತೆ ಇಲ್ಲದಿದ್ದರೂ ಭಾರತ ಉತ್ತಮ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಕೆಲವರು ನಿರಾಶೆ ಮತ್ತು ಸುಳ್ಳು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದರೂ, ಭಾರತದ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಮೋದಿ ತಿಳಿಸಿದರು.
ದೇಶದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಬೇಕಿದ್ದು, ಅದಕ್ಕಾಗಿ ಭಾರತ ಸ್ವಾವಲಂಬಿಯಾಗಬೇಕು. ಯುವಜನರ ಕನಸುಗಳನ್ನು ನನಸಾಗಿಸಲು ಎಲ್ಲರೂ ಹೆಚ್ಚಿನ ಶ್ರಮ ವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ಈ ವೇಳೆ ವಿದೇಶ ಪ್ರವಾಸಕ್ಕೆ ತೆರಳದಂತೆ, ಮದುವೆಗಳನ್ನು ವಿದೇಶಗಳಲ್ಲಿ ಆಯೋಜಿಸದಂತೆ ಹಾಗೂ ಅಗತ್ಯವಿಲ್ಲದಿದ್ದರೆ ಚಿನ್ನ ಖರೀದಿಸದಂತೆ ಜನರಿಗೆ ಮೋದಿ ಮನವಿ ಮಾಡಿದರು. ದೇಶೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಸ್ವದೇಶಿ ಅಭಿಯಾನವನ್ನು ಬಲಪಡಿಸಬೇಕು ಎಂದರು.
ತಮ್ಮ ಸರ್ಕಾರದ ನೀತಿಗಳು ಉತ್ತಮವಾಗಿದ್ದು, ಉದ್ದೇಶವೂ ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ದೇಶ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪುತ್ತಿದೆ ಎಂದು ಪ್ರಧಾನಿ ಹೇಳಿದರು. 2026-27ನೇ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ಹೆಚ್ಚಿನ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಪಶ್ಚಿಮ ಏಷ್ಯಾದ ಯುದ್ಧದಿಂದ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಆತಂಕಗಳ ನಡುವೆಯೂ ಭಾರತೀಯ ಆರ್ಥಿಕತೆ ತನ್ನ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದೆ.
