ನವದೆಹಲಿ, ಮೇ 24-ಆಫ್ರಿಕಾದ ಕೆಲವು ಭಾಗಗಳಲ್ಲಿ ಬಂಡಿಬುಗ್ಯೊ ತಳಿಯ ವೈರಸ್‌ನಿಂದ ಉಂಟಾಗಿರುವ ಎಬೋಲಾ ಸೋಂಕಿನ ಹರಡುವಿಕೆಯ ಹಿನ್ನೆಲೆ, ಭಾರತೀಯರು ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್‌ಗೆ ಅನಗತ್ಯ ಪ್ರಯಾಣ ಮಾಡಬೇಡಿ ಎಂದು ಭಾರತ ಸರ್ಕಾರ ಸಲಹೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ನಂತರ ಈ ಸಲಹೆ ಹೊರಡಿಸಲಾಗಿದೆ.
ಅದೇ ರೀತಿ ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೂಡ ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಸೋಂಕನ್ನು ಖಂಡ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ. ಭಾರತ ಸರ್ಕಾರ ಹೊರಡಿಸಿದ ಸಲಹೆಯಲ್ಲಿ, ಮೇ 22ರಂದು ತುರ್ತು ಸಮಿತಿಯು ಪ್ರವೇಶ ಕೇಂದ್ರಗಳಲ್ಲಿ ರೋಗ ನಿಗಾವನ್ನು ಬಲಪಡಿಸುವಂತೆ ತಾತ್ಕಾಲಿಕ ಶಿಫಾರಸುಗಳನ್ನು ನೀಡಿದೆ ಎಂದು ತಿಳಿಸಿದೆ.
ಸೋಂಕು ಪೀಡಿತ ಪ್ರದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಜ್ವರ ಅಥವಾ ಸಂಬಂಧಿತ ಲಕ್ಷಣಗಳನ್ನು ಪತ್ತೆಹಚ್ಚಿ, ಪರಿಶೀಲಿಸಿ ಮತ್ತು ನಿರ್ವಹಿಸುವಂತೆ ಸೂಚಿಸಲಾಗಿದೆ.
ಕಾಂಗೋ ಮತ್ತು ಉಗಾಂಡಾ ಪಕ್ಕದ ರಾಷ್ಟ್ರಗಳಾದ ದಕ್ಷಿಣ ಸುಡಾನ್ ಸೇರಿ ಹಲವು ದೇಶಗಳು ಸೋಂಕು ಹರಡುವ ಅಪಾಯದ ವಲಯದಲ್ಲಿವೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಈ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಪ್ರಯಾಣಿಸುತ್ತಿರುವ ಭಾರತೀಯರು ಸ್ಥಳೀಯ ಆರೋಗ್ಯ ಇಲಾಖೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಸ್ವಚ್ಛತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ, ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳ ಸಂಪರ್ಕವನ್ನು ತಪ್ಪಿಸುವಂತೆ ಹಾಗೂ ಜ್ವರ ಅಥವಾ ಇತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಸೂಚಿಸಲಾಗಿದೆ.
ಎಬೋಲಾ ಒಂದು ವೈರಲ್, ರಕ್ತಸ್ರಾವ ಜ್ವರವಾಗಿದ್ದು, ಬಂಡಿಬುಗ್ಯೊ ವೈರಸ್ ತಳಿಯಿಂದ ಉಂಟಾಗುತ್ತದೆ. ಈ ಸೋಂಕಿಗೆ ಹೆಚ್ಚಿನ ಮರಣ ಪ್ರಮಾಣ ಇರುವುದಾಗಿ ತಿಳಿಸಲಾಗಿದೆ. ಬಂಡಿಬುಗ್ಯೊ ತಳಿಯ ಎಬೋಲಾ ಸೋಂಕು ತಡೆಗಟ್ಟಲು ಅಥವಾ ಚಿಕಿತ್ಸೆನೀಡಲು ಇದುವರೆಗೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಔಷಧಿಯನ್ನು ಅಧಿಕೃತವಾಗಿ ಅನುಮೋದಿಸಲಾಗಿಲ್ಲ ಎಂದು ಸಲಹೆಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಇದುವರೆಗೆ ಬಂಡಿಬುಗ್ಯೊ ತಳಿಯ ಎಬೋಲಾ ಸೋಂಕಿನ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
