ತೆಹ್ರಾನ್/ದುಬೈ,ಆ.9-ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗು ಸಂಚಾರವನ್ನು ಪುನಃ ಸಹಜಗೊಳಿಸುವ ಪ್ರಯತ್ನಗಳ ನಡುವೆ ಇರಾನ್ ಅಮೆರಿಕದ ಮುಂದೆ ಹಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ.
ಅಮೆರಿಕ ತನ್ನ ನಿಲುವು ಮತ್ತು ನಡೆ ಬದಲಾಯಿಸುವವರೆಗೆ ಜಲಸಂಧಿ ಸಂಪೂರ್ಣವಾಗಿ ತೆರೆಯುವುದಿಲ್ಲ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹಮದ್ ಬಘರ್ ಜೊಲ್ಘಾದರ್ ಹೇಳಿದ್ದಾರೆ. ಇರಾನ್‌ನ ಈ ನಿಲುವು ಅಮೆರಿಕ-ಇರಾನ್ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳಿಗೆ ಹೊಸ ಸವಾಲು ತಂದಿದೆ.
ಇವುಗಳಲ್ಲಿ ಹಲವು ಬೇಡಿಕೆಗಳು ಕೇವಲ ಹಾರ್ಮುಜ್ ಜಲಸಂಧಿಯ ನಿರ್ವಹಣೆಗೆ ಸೀಮಿತವಾಗದೆ, ಅಮೆರಿಕ?ಇರಾನ್ ನಡುವಿನ ಸಂಪೂರ್ಣ ಭದ್ರತಾ, ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳನ್ನೇ ಒಳಗೊಂಡಿವೆ. ಹೀಗಾಗಿ ಜಲಸಂಧಿ ತೆರೆಯುವ ಪ್ರಶ್ನೆ ಈಗ ವಿಶಾಲ ರಾಜತಾಂತ್ರಿಕ ಒಪ್ಪಂದದ ಭಾಗವಾಗಿದೆ. ಈ ರಾಜತಾಂತ್ರಿಕ ಬೆಳವಣಿಗೆಯ ನಡುವೆಯೇ ಆಗಸ್ಟ್ 8ರಂದು ಯುಎಇ, ತನ್ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಂಆಓಔಅಗೆ ಸಂಬಂಧಿಸಿದ ಹಡಗೊಂದು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದಾಗ ಇರಾನ್ ಕ್ಷಿಪಣಿ ದಾಳಿಗೆ ಗುರಿಯಾಗಿದೆ ಎಂದು ಆರೋಪಿಸಿದೆ.
ಜೂನ್ ಒಪ್ಪಂದದ ಬಳಿಕ ಮತ್ತೆ ಏಕೆ ಬಿಕ್ಕಟ್ಟು?:
ಹಾರ್ಮುಜ್ ಬಿಕ್ಕಟ್ಟಿನ ಮೂಲವನ್ನು ಜೂನ್‌ನ ಅಮೆರಿಕ-ಇರಾನ್ ಒಪ್ಪಂದದವರೆಗೆ ಹಿಂದಕ್ಕೆ ತೆಗೆದುಕೊಂಡು ನೋಡಬೇಕಾಗುತ್ತದೆ. ಜೂನ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸುವ ಹಾಗೂ ಮುಂದಿನ 60 ದಿನಗಳಲ್ಲಿ ಅಂತಿಮ ಒಪ್ಪಂದದತ್ತ ಸಾಗುವ ತಿಳುವಳಿಕೆ ಮೂಡಿತ್ತು. ಅದರ ಭಾಗವಾಗಿ ಅಮೆರಿಕ ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಹಂತ ಹಂತವಾಗಿ ತೆಗೆದುಹಾಕಬೇಕಾಗಿತ್ತು; ಇರಾನ್ ಹಾರ್ಮುಜ್ ಮೂಲಕ ವಾಣಿಜ್ಯ ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬದ್ಧತೆಯನ್ನು ಹೊಂದಿತ್ತು.
ಎಡಿಎನ್‌ಒಸಿ ಪ್ರಕಾರ, ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾದ ಬಳಿಕ ತನ್ನ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸರಣಿ ನಡೆದಿದೆ. ಕಂಪನಿಯ ಹೇಳಿಕೆಯ ಪ್ರಕಾರ, ಇದುವರೆಗೆ 15 ಹಡಗುಗಳು ದಾಳಿಗೆ ಗುರಿಯಾಗಿದ್ದು, ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಆದರೆ ಈ ಎಲ್ಲ ದಾಳಿಗಳಿಗೂ ಇರಾನೇ ಹೊಣೆ ಎಂದು ಸ್ವತಂತ್ರವಾಗಿ ದೃಢಪಟ್ಟಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಇದೇ ಸಂದರ್ಭದಲ್ಲಿ ಬ್ರಿಟನ್‌ನ ಯುಕೆಎಂಟಿಒ ಸಂಸ್ಥೆಯೂ ಓಮನ್‌ನ ಖಸಬ್‌ನ ಪೂರ್ವ ಭಾಗದಲ್ಲಿ ಹಡಗೊಂದು ಉತ್ಕ್ಷೇಪಕದಿಂದ ಹೊಡೆದು ಬೆಂಕಿ ಕಾಣಿಸಿಕೊಂಡ ಘಟನೆ ವರದಿ ಮಾಡಿದೆ. ಬೆಂಕಿ ನಂದಿಸಲಾಗಿದ್ದು, ಹಡಗು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ.
