ಬೆಂಗಳೂರು, ಜ.23- ಸತತ ಸಂಧಾನ ಮತ್ತು ಸರಣಿ ಸಭೆಗಳ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ ಪಟ್ಟು ಸಡಿಲಿಸಿ ವಿಧಾನಸಭೆಗೆ ಆಗಮಿಸಿ, ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ್ದರು, ಆದರೆ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣವನ್ನು ಪೂರ್ತಿಯಾಗಿ ಓದದೆ, ಚುಟುಕಾಗಿ ಓದುವ ಮೂಲಕ ತಮ ಜವಾಬ್ದಾರಿಯನ್ನು ನಿಭಾಯಿಸಿದ್ಧಾರೆ. ಈ ವೇಳೆ ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರಿಗೆ ಧಿಕ್ಕಾರ ಹಾಕಿ, ಘೇರಾವ್ ಮಾಡಿರುವ ಬೆಳವಣಿಗಳು ನಡೆದಿದೆ.
ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭೆ ಜಂಟಿ ಅಧಿವೇಶನದಲ್ಲಿಂದು ಹೈಡ್ರಾಮವೇ ನಡೆದಿದೆ. ರಾಜ್ಯ ವಿಧಾನಸಭೆಯ ಮಟ್ಟಿಗೆ ಇಂದಿನ ಬೆಳವಣಿಗೆ ಹೊಸದಾಗಿತ್ತು. ಹಿಂದೆಂದು ರಾಜ್ಯಪಾಲರು ರಾಜ್ಯ ಸರ್ಕಾರ ಭಾಷಣ ಓದದೆ ನಿರ್ಗಮಿಸಿರಲಿಲ್ಲ. ನಿನ್ನೆ ಸಂಜೆಯಿಂದ ನಡೆದಿದ್ದ ಬೆಳವಣಿಗೆಗಳು ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷಮತ ಹಾದಿಯನ್ನು ಸೃಷ್ಟಿಸಿವೆ.
ಸಾಂಪ್ರದಾಯಿಕ ಸ್ವಾಗತ:
ಬೆಳಗ್ಗೆ 11 ಗಂಟೆಗೆ ನಿಗದಿತ ಸಮಯಕ್ಕೆ ಸರಿಯಾಗಿ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಿದರು. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಎಂದಿನಂತೆ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಬಳಿಯೇ ಹೂಗುಚ್ಛ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಆರಂಭದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರು ಔಪಚಾರಿಕವಾಗಿ ಚರ್ಚೆ ನಡೆಸಿದರು. ಗೌರವಾದರಗಳೊಂದಿಗೆ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರನ್ನು ಕರೆದು ಕೊಂಡು ಹೋಗಲಾಯಿತು. ಈ ಮೂಲಕ ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಗೈರು ಹಾಜರಾಗುವುದರಿಂದ ಸಂಭವಿಸಬಹುದಾದ ಸಾಂವಿಧಾನಿಕ ಬಿಕ್ಕಟ್ಟೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತ್ತು. ಆದರೆ ರಾಜ್ಯಪಾಲರು ಸಂವಿಧಾನ ಕಲಂ 173 ಮತ್ತು 176ರಂತೆ ಸರ್ಕಾರದ ಸಚಿವ ಸಂಪುಟ ಸಿದ್ದಪಡಿಸಿಕೊಟ್ಟಿರುವ ಭಾಷಣವನ್ನು ಪೂರ್ತಿಯಾಗಿ ಓದದೆ ಇರುವುದು ಚರ್ಚೆಗೆ ಗ್ರಾಸವಾಗಿದೆ. ರಾಜ್ಯಪಾಲರ ಈ ನಡೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಹೇಳಿಕೆ ನೀಡಿದ್ದರು. ಸರ್ಕಾರ ಭಾಷಣದ ಪೂರ್ಣ ಭಾಗವನ್ನು ಓದದೆ ಇರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವರ್ಷದ ಆರಂಭದಲ್ಲಿ ನಡೆಯಬೇಕಿದ್ದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ವಾಡಿಕೆ. ಆದರೆ ರಾಜ್ಯ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ, ವಿಕಸಿತ ಭಾರತ ಉದ್ಯೋಗ ಖಾತ್ರಿ ಹಾಗೂ ಜೀವನೋಪಾಯ ಮಿಷನ್ ಗ್ರಾಮೀಣ ಕಾಯ್ದೆ ವಿರುದ್ಧವಾಗಿ ಕೆಲ ಅಂಶಗಳನ್ನು ಬರೆದುಕೊಟ್ಟಿತ್ತು.
ಆ ಅಂಶಗಳನ್ನು ಓದುವುದರಿಂದಾಗುವ ಮುಜುಗರದಿಂದ ಪಾರಾಗಲು ರಾಜ್ಯಪಾಲರು ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ರಾಜ್ಯಪಾಲರು ಅನುಸರಿಸದ ಮಾರ್ಗವನ್ನೇ ಪಾಲಿಸಿದ್ದಾರೆ. ಭಾಗಶಃ ಭಾಷಣ ಓದುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದ್ದಾರೆ. ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆಯೇ ಚರ್ಚೆ ನಡೆಸಲು ಉದ್ದೇಶಿಸಿರುವ ಈ ಅಧಿವೇಶದನಲ್ಲಿ ರಾಜ್ಯಪಾಲರು ತಮ ಭಾಷಣವನ್ನು ಕೆಲವೇ ಮಾತುಗಳಲ್ಲಿ ಮುಗಿಸಿರುವುದನ್ನು ಆಡಳಿತ ಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ.
ರಾಜ್ಯಪಾಲರಿಗೆ ಘೇರಾವ್:
ರಾಜುಪಾಲರು ಭಾಷಣ ಆರಂಭಿಸುತ್ತಿದ್ದಂತೆ ಆಡಳಿತ ಪಕ್ಷ ನಿರಾಳವಾಗಿತ್ತು. ಎಲ್ಲರೂ ಕುರ್ಚಿಯಲ್ಲಿ ಆಸೀನರಾಗಿದ್ದರು. ರಾಜ್ಯಪಾಲರ ಬಲಭಾಗದಲ್ಲಿ ವಿಧಾನಸಭೆ ಅಧ್ಯಕ್ಷರು, ಎಡಭಾಗದಲ್ಲಿ ಸಭಾಪತಿಯವರು ಕುಳಿತಿದ್ದರು. ಕೇವಲ ಎರಡೇ ನಿಮಿಷದಲ್ಲಿ ಭಾಷಣ ಮೊಟಕುಗೊಳಿಸಿ ರಾಜ್ಯಪಾಲರು ಹೊರಡು ಅನುವಾದಾಗ ಸಭಾಪತಿಯವರು ಗಲಿಬಿಲಿಗೆ ಒಳಗಾದರು, ತಾವು ಕುಳಿತಿದ್ದ ಕುರ್ಚಿಯಿಂದ ಎದ್ದು ದಾರಿ ಬಿಟ್ಟುಕೊಟ್ಟರು. ಆಡಳಿತ ಪಕ್ಷದ ಎಲ್ಲಾ ಸದಸ್ಯರು ಎದ್ದು ನಿಂತು ಭಾಷಣದ ಪುಸ್ತಕವನ್ನು ಪದರ್ಶಿಸಿ, ಪೂರ್ಣ ಓದುವಂತೆ ಒತ್ತಾಯಿಸಿದ್ದರು. ಸೇಮ್ ಸೇಮ್ ಎಂದು ಘೋಷಣೆ ಕೂಗಿದರು. ರಾಜ್ಯಪಾಲರು ಕೈ ಮುಗಿದುಕೊಂಡು ತಮ ಪಾಡಿಗೆ ತಾವು ಹೊರ ನಡೆಯುತ್ತಿದ್ದರು. ಬಿಜೆಪಿ ಸದಸ್ಯರು ಪ್ರತಿವಂದಿಸಿದರು. ಸಭಾಧ್ಯಕ್ಷರ ತರಾತುರಿಯಲ್ಲಿ ರಾಜ್ಯಪಾಲರನ್ನು ಹಿಂಬಾಲಿಸಿದರು.
ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ರಾಜ್ಯಪಾಲರಿಗೆ ದಿಕ್ಕಾರ ಎಂದು ಆಡಳಿತ ಪಕ್ಷದ ಸದಸ್ಯರು ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದ ಪರವಾಗಿ ಘೋಷಣೆ ಕೂಗಿದ್ದಾರೆ. ಭಾರತ್ ಮಾತಾ ಕೀ ಜಯ ಘೋಷ ಮೊಳಗಿಸಿದ್ದಾರೆ. ಸಂವಿಧಾನ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿರುದ್ಧ ಶಾಸನ ಸಭೆಯಲ್ಲಿ ಧಿಕ್ಕಾರ ಘೋಷಣೆ ಕೂಗಿರುವುದು ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೆ ನಿಲ್ಲದ ಕಾಂಗ್ರೆಸ್ ನ ಕೆಲ ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿ ಘೇರಾವ್ ಹಾಕುವ ಮಾದರಿಯಲ್ಲಿ ವರ್ತಿಸಿದ್ದಾರೆ.
ಕಾಂಗ್ರೆಸ್ ನ ಸದಸ್ಯರಾದ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಎಸ್.ರವಿ, ಐವಾನ್ ಡಿ.ಸೋಜಾ, ಶಾಸಕರಾದ ಶರತ್ ಬಚ್ಚೆಗೌಡ, ಕೋನರೆಡ್ಡಿ ಅವರು ಭಾಷಣದ ಪ್ರತಿಗಳನ್ನು ರಾಜ್ಯಪಾಲರಿಗೆ ತೋರಿಸಿ ಇದನ್ನು ಏಕೆ ಓದಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಮಾರ್ಷಲ್ ಗಳ ಬಿಗಿ ಭದ್ರತೆಯಲ್ಲಿ ರಾಜ್ಯಪಾಲರು ತಮ ಪಾಡಿಗೆ ತಾವು ಮುಂದೆ ನಡೆದಾಗ ವಿಧಾನಸಭೆಯ ನಿರ್ಗಮನ ದ್ವಾರದ ಬಳಿ ಅಡ್ಡಲಾಗಿ ಬಂದ ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಭಾಷಣವನ್ನು ಪೂರ್ತಿಯಾಗಿ ಓದುವಂತೆ ಏರಿದ ಧ್ವನಿಯಲ್ಲಿ ಆಗ್ರಹಿಸಿದ್ಧಾರೆ. ಈ ವೇಳೆ ಹರಿಪ್ರಸಾದ್ ಅವರ ಅಂಗಿ ಹರಿದಿದೆ.
ರಾಜ್ಯಪಾಲರು ವಿಧಾನಸಭೆಯ ಹೊರ ಭಾಗ ಪ್ರವೇಶಿಸುತ್ತಿದ್ದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಬಿಗಿ ರಕ್ಷಣೆ ನೀಡಿ ರಾಜ್ಯಪಾಲರನ್ನು ಕಾರಿನವರೆಗೂ ಕರೆದೊಯ್ದಿದ್ದಾರೆ. ರಾಜ್ಯಪಾಲರನ್ನು ಗೌರವಪೂರ್ವಕವಾಗಿ ಬೀಳ್ಕೊಡಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಇತರರು ರಾಜ್ಯಪಾಲರನ್ನು ಹಿಂಬಾಲಿಸಿದರು. ಆದರೆ ಆಡಳಿತ ಪಕ್ಷ ಶಾಸಕರು ದಾರಿಯುದ್ದಕ್ಕೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಹಿಂಬಾಲಿಸಿದರು. ಈ ವೇಳೆ ತಳ್ಳಾಟ ನೂಕಾಟ ನಡೆಯಿತು. ಗುಂಪಿನಲ್ಲಿ ಮುಖ್ಯಮಂತ್ರಿಯವರೆ ಹಿಂದುಳಿಯಬೇಕಾಯಿತು.
