ಬೆಂಗಳೂರು,ಸೆ.2- ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸರಣಿ ರಾಜ್ಯದ ಯುವಜನತೆಯನ್ನು ಮತ್ತೆ ಬೆಚ್ಚಿಬೀಳಿಸಿದೆ.
ಪದವಿ ಹಂತದಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಅಭ್ಯರ್ಥಿಯೊಬ್ಬ ಲಕ್ಷಾಂತರ ರೂಪಾಯಿ ಲಂಚದ ಬಲೆಯಿಂದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಸ್ಫೋಟಕ ಸತ್ಯ ತನಿಖೆಯಿಂದ ಬಹಿರಂಗಗೊಂಡಿದೆ.
ಮಹಮದ್ ಸುಹೇಲ್ ಬಂಡೇಗೋಳ್ ಎಂಬ ಅಭ್ಯರ್ಥಿ ಡಿಗ್ರಿಯಲ್ಲಿ ಓದಲು ಹೆಣಗಾಡಿ ಹಲವು ವಿಷಯಗಳಲ್ಲಿ ಫೇಲ್ ಆಗಿ ನಂತರ ಹೇಗೋ ಪಾಸ್ ಮಾಡಿಕೊಂಡಿದ್ದಾನೆ. ಇದೀಗ ಹಣದ ಬಲದಿಂದ ಕೆಪಿಎಸ್‌ಸಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ತನಿಖಾ ಸಂಸ್ಥೆಯ ಬಲೆಗೆ ಬಿದ್ದಿದೆ. ಈ ನೇಮಕಾತಿ ಅಕ್ರಮದಲ್ಲಿ ಒಟ್ಟು 40 ಲಕ್ಷ ರೂಪಾಯಿಗೆ ಡೀಲ್ ಕುದುರಿತ್ತು ಎನ್ನಲಾಗಿದೆ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಣೆಗೂ ಮುನ್ನವೇ ಅಭ್ಯರ್ಥಿಯು ಮುಂಗಡವಾಗಿ 20 ಲಕ್ಷ ರೂ. ನೀಡಿರುವುದು ಸಿಐಡಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ತಾತ್ಕಾಲಿಕ ಪಟ್ಟಿ ಬಿಡುಗಡೆಯಾದ ಬಳಿಕ ಬಾಕಿ ಉಳಿದ 20 ಲಕ್ಷ ರೂಪಾಯಿಗಳನ್ನು ಪಾವತಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಖುದ್ದು ಅಭ್ಯರ್ಥಿಯೇ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.
ಪರೀಕ್ಷಾ ವ್ಯವಸ್ಥೆಯಲ್ಲಿ ರಾಜೀ ಮಾಡಿಕೊಳ್ಳಲು ಕೆಲ ಪ್ರಭಾವಿ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳು ಕೈಜೋಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. 70-80 ಲಕ್ಷದವರೆಗೆ ಬೇಡಿಕೆ: ಸುಮಾರು 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಕ್ರಮದ ಆರೋಪಗಳು ಜುಲೈನಲ್ಲಿ ಬಹಿರಂಗವಾಗಿದ್ದವು. ಅಭ್ಯರ್ಥಿಗಳಿಂದ ಮಧ್ಯವರ್ತಿಗಳು 70 ಲಕ್ಷದಿಂದ 80 ಲಕ್ಷದವರೆಗೆ ಹಣ ಕೇಳಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಕೆಲವರು ಆಡಿಯೋ, ಫೋಟೋ ಹಾಗೂ ಇತರ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಉತ್ತರ ಪತ್ರಿಕೆಗಳಲ್ಲಿ ತಿರುಚಾಟ ಹಾಗೂ ಆಯ್ಕೆ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿರುವ ಆರೋಪಗಳನ್ನು ತನಿಖೆ ಮಾಡಲಾಗುತ್ತಿದೆ.
ರಹಸ್ಯ ಪರೀಕ್ಷಾ ಕೇಂದ್ರಗಳೂ ಪತ್ತೆ: ಇದೀಗ ತನಿಖೆಯಲ್ಲಿ ಮತ್ತೊಂದು ಗಂಭೀರ ಆರೋಪ ಹೊರಬಂದಿದೆ. ಹಣ ಪಾವತಿಸಿದ ಅಭ್ಯರ್ಥಿಗಳನ್ನು ಬೆಂಗಳೂರು, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ಕೆಲವು ಸ್ಥಳಗಳ ರೆಸಾರ್ಟ್‌ಗಳಲ್ಲಿ ಇರಿಸಿ ತರಬೇತಿ ನೀಡಲಾಗಿತ್ತು ಮತ್ತು ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ನೀಡಲಾಗಿತ್ತು ಎನ್ನಲಾಗಿದೆ.ಸೆಪ್ಟೆಂಬರ್ 2ರ ವರದಿಗಳ ಪ್ರಕಾರ, ಕನಿಷ್ಠ ಆರು ಅಭ್ಯರ್ಥಿಗಳು ಹಣ ಪಾವತಿಸಿ ಈ ಜಾಲದ ಮೂಲಕ ಪರೀಕ್ಷೆ ಬರೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಮನೆಗಳ ಶೋಧನೆ ಹಾಗೂ ವಿಚಾರಣೆಯಿಂದ ತನಿಖಾಧಿಕಾರಿಗಳಿಗೆ ಮತ್ತಷ್ಟು ಮಾಹಿತಿ ದೊರೆತಿದೆ.
