ಬೆಂಗಳೂರು,ಜೂ.17- ವಿಧಾನಪರಿಷತ್ ಚುಣಾವಣೆಯಲ್ಲಿ ನಿಗದಿಗಿಂತ ಮೊದಲೇ ಮತದಾನ ಮುಗಿದ ಹಿನ್ನೆಲೆಯಲ್ಲಿ ಬಿಜೆಪಿಯು ವಿಧಾನಸೌಧದಲ್ಲೇ ತನ್ನ ಅಭ್ಯರ್ಥಿಗಳಿಗೆ ಫಲಿತಾಂಶಕ್ಕೂ ಮುನ್ನವೇ ಅಭಿನಂದನೆ ಸಲ್ಲಿಸಿತು. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ 12 ಗಂಟೆಯೊಳಗೆ ಬಿಜೆಪಿಯ ಬಹುತೇಕ ಎಲ್ಲ ಶಾಸಕರೂ ಪಕ್ಷ ನಿಗದಿಪಡಿಸಿದ ಅಭ್ಯರ್ಥಿಗೆ ತಮ ಮತ ಚಲಾಯಿಸಿದ್ದರು.
ಬಿಜೆಪಿಯ ಒಟ್ಟು 63 ಮತಗಳಲ್ಲಿ ರಘು ಕೌಟಿಲ್ಯಗೆ 30 ಹಾಗೂ ಲಿಂಗರಾಜ್ ಪಾಟೀಲ್‌ಗೆ ತಲಾ 30 ಮತಗಳನ್ನು ನಿಗದಿಪಡಿಸಲಾಗಿತ್ತು. ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ಮಾತ್ರ ಕೆಲವು ಕಾರಣಗಳಿಂದ ತಡವಾಗಿ ಆರಂಭಿಸಿದ್ದರು. ಉಳಿದಂತೆ ಎಲ್ಲ ಶಾಸಕರೂ ಬಹುತೇಕ 12 ಗಂಟೆಯೊಳಗೆ ಮತ ಚಲಾಯಿಸಿದರು.

ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಕೊಠಡಿಗೆ ಕರೆಸಿ ಅಭಿನಂದನೆ ಸಲ್ಲಿಸಿ ಎಲ್ಲ ಶಾಸಕರೂ ಶುಭ ಕೋರಿದರು.
ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಶಾಸಕರು ಹಾಜರಿದ್ದರು.
