ನವದೆಹಲಿ,ಆ.3- ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಸೋಮವಾರ ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಖುಲಾಸೆಗೊಳಿಸಿದೆ. ಈ ತೀರ್ಪು ಭಾರತೀಯ ಕ್ರೀಡೆಯಲ್ಲಿ ಅತ್ಯಂತ ಉನ್ನತ ಮಟ್ಟದ ಕಾನೂನು ಹೋರಾಟಗಳಲ್ಲಿ ಒಂದಾದ ರಾಜಕೀಯ ನಾಯಕಿಗೆ ನಿರಾಳತೆಯನ್ನು ತಂದಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಬಿಜೆಪಿಯ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಸಹ ಆರೋಪಿ ವಿನೋದ್ ತೋಮರ್ ಅವರನ್ನು ದೋಷಮುಕ್ತಗೊಳಿಸಿ (ಖುಲಾಸೆ) ಆದೇಶಿಸಿದೆ. ದೆಹಲಿ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್ ಅವರು ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ನಡೆಸಿದ ತೀವ್ರ ಪ್ರತಿಭಟನೆ ಮತ್ತು ದೆಹಲಿ ಪೊಲೀಸರ ತನಿಖೆ ಹಾಗೂ 1500 ಪುಟಗಳ ಚಾರ್ಜ್ಶೀಟ್ ಆಧರಿಸಿ ಈ ವಿಚಾರಣೆ ನಡೆದಿತ್ತು. ದೇಶದ ದಿಗ್ಗಜ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ದೇಶದ ಪ್ರಮುಖ ಕ್ರೀಡಾಪಟುಗಳು ರಸ್ತೆಗಿಳಿದು ಐತಿಹಾಸಿಕ ಪ್ರತಿಭಟನೆ ನಡೆಸಿದ್ದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಲಾಗಿತ್ತು.
ಈ ಪ್ರತಿಭಟನೆಯ ತೀವ್ರತೆಯ ಬಳಿಕ ಎಚ್ಚೆತ್ತ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದರು. ಜೂನ್ 15, 2023 ರಂದು ಒಟ್ಟು 1500 ಪುಟಗಳ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354, 354 ಮತ್ತು 506 ರಡಿ ಆರೋಪಗಳನ್ನು ಹೊರಿಸಲಾಗಿತ್ತು.
ಅಲ್ಲದೆ, ಮೇ 2024ರಲ್ಲಿ ನ್ಯಾಯಾಲಯವು ಆರೋಪಗಳನ್ನು ನಿಗದಿಪಡಿಸಿ ವಿಚಾರಣೆ ನಡೆಸಿತ್ತು. ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆ ಹಾಗೂ ವಾದ-ಪ್ರತಿವಾದಗಳ ವೇಳೆ ಉಭಯ ಪಕ್ಷಗಳ ವಕೀಲರು ತಮ ವಾದ ಮಂಡಿಸಿದ್ದರು.
ದೂರುದಾರರ ಪರವಾಗಿ ಹಿರಿಯ ವಕೀಲೆ ರೆಬೆಕಾ ಜಾನ್ ಹಾಗೂ ಬ್ರಿಜ್ ಭೂಷಣ್ ಪರವಾಗಿ ವಕೀಲ ರಾಜೀವ್ ಮೋಹನ್ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಾಧಾರಗಳು ಮತ್ತು ಆರೋಪಗಳನ್ನು ಸಾಬೀತುಪಡಿಸುವಲ್ಲಿ ಎದುರಾದ ಕೊರತೆಗಳನ್ನು ಪರಿಗಣಿಸಿ, ನ್ಯಾಯಾಲಯವು ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಡಬ್ಲ್ಯೂಎಫ್ಐನ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.ಈ ತೀರ್ಪಿನೊಂದಿಗೆ ಕುಸ್ತಿಪಟುಗಳು ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಈ ಬಹುಚರ್ಚಿತ ಕಾನೂನು ಹೋರಾಟಕ್ಕೆ ಪ್ರಮುಖ ತಿರುವು ಸಿಕ್ಕಂತಾಗಿದೆ.
